ನೀನಾಸಂ ಸತೀಶ್ ಆರಂಭದಿಂದಲೂ ಮಂಡ್ಯ ಶೈಲಿಯ ಭಾಷಾ ಸೊಗಡಿನಿಂದ ನಗಿಸುತ್ತಾ ಬಂದವರು. ಇದರೊಂದಿಗೆ ವಿಶಿಷ್ಟ ನಟನಾಗಿ ನೆಲೆ ಕಂಡುಕೊಂಡಿದ್ದ ಅವರು ಆ ನಂತರದಲ್ಲಿ ನಾಯಕನಾಗಿಯೂ ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಬ್ರಹ್ಮಚಾರಿಯಲ್ಲಿ ಅವರದ್ದು ಅದೆಲ್ಲಕ್ಕಿಂತಲೂ ಮಜವಾದ ಪಾತ್ರವೆಂಬುದು ಈ ಹಿಂದೆ ಟ್ರೇಲರ್‍ನೊಂದಿಗೇ ಸಾಬೀತಾಗಿದೆ. ಅದಿತಿ ಪ್ರಭುದೇವ ಪಾತ್ರವೂ ಕೂಡಾ ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರತಿ ಪ್ರೇಕ್ಷಕರೂ ಕೂಡಾ ಇಂಥಾ ಹಾಸ್ಯ ಪ್ರಧಾನ ಚಿತ್ರಗಳನ್ನು ಕಣ್ತುಂಬಿಕೊಂಡು ಮನಸಾರೆ ನಕ್ಕು ಹಗುರಾಗಲು ಕಾದು ಕೂತಿರುತ್ತಾರೆ. ಅವರೆಲ್ಲರ ಪಾಲಿಗೆ ಫುಲ್ ಮೀಲ್ಸ್‍ನಂತಿರೋ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
Advertisement
ನಿರ್ಮಾಪಕ ಉದಯ್ ಮೆಹ್ತಾ ಅವರು ಹೇಳಿದ್ದ ಒಂದೆಳೆ ಕಥೆಯನ್ನು ನಿರ್ದೇಶಕ ಚಂದ್ರಮೋಹನ್ ವಿಸ್ತರಿಸಿ, ಅದಕ್ಕೊಂದು ಸಿನಿಮಾ ಚೌಕಟ್ಟು ಕೊಡುವುದಕ್ಕೆ ವರ್ಷಗಳಷ್ಟು ಕಾಲ ಹಿಡಿದಿತ್ತು. ಈ ಹೊತ್ತಿನಲ್ಲಿ ಬ್ರಹ್ಮಚಾರಿ ಯಾರಾಗಬೇಕೆಂಬಂಥಾ ಪ್ರಶ್ನೆ ಉದ್ಭವವಾದಾಗ ಚಂದ್ರಮೋಹನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾರಿಗೆ ನೀನಾಸಂ ಸತೀಶ್ ಮಾತ್ರವೇ ಈ ಪಾತ್ರಕ್ಕೆ ಸೂಟ್ ಆಗುತ್ತಾರೆ ಅನ್ನಿಸಿತ್ತಂತೆ. ಈ ಒಂದೆಳೆಯನ್ನು ಸತೀಶ್‍ಗೆ ಹೇಳಿದಾಗ ಅವರು ಖುಷಿಗೊಂಡಿದ್ದರಾದರೂ ಅದನ್ನು ಹೇಗೆ ಕಟ್ಟಿಕೊಡುತ್ತಾರೆ, ವಲ್ಗರ್ ಆಗಿಯೇನಾದರೂ ರೂಪಿಸುತ್ತಾರಾ ಎಂಬ ಆತಂಕ ಇತ್ತಂತೆ. ಆದರೆ ಅಂತಿಮವಾಗಿ ಸಿದ್ಧಗೊಂಡ ಕಥೆ ಹೇಳಿದಾಗ ಸತೀಶ್ ಥ್ರಿಲ್ ಆಗಿದ್ದರಂತೆ.
Advertisement
Advertisement
ಒಂದು ಗಂಭೀರ ದೈಹಿಕ ಸಮಸ್ಯೆಯನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದರೂ ಸಹ ಎಲ್ಲಿಯೂ ಮುಜುಗರವಾಗದಂತೆ ಕಟ್ಟಿ ಕೊಟ್ಟಿರುವ ರೀತಿಯೇ ಸತೀಶ್ ಅವರಿಗೆ ಹಿಡಿಸಿತ್ತಂತೆ. ನಿರ್ದೇಶಕ ಚಂದ್ರ ಮೋಹನ್ ಅವರಿಗೆ ಈ ಪಾತ್ರ ಹೀಗೆಯೇ ಮೂಡಿ ಬರಬೇಕೆಂಬ ಕನಸಿನಂಥಾ ಕಲ್ಪನೆ ಇತ್ತು. ಅದಕ್ಕೂ ಒಂದು ಕೈ ಮಿಗಿಲಾಗಿಯೇ ಬ್ರಹ್ಮಚಾರಿಯ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ. ಅಯೋಗ್ಯ ಭರ್ಜರಿ ಯಶ ಕಂಡ ನಂತರ ಚಂಬಲ್ ಚಿತ್ರದ ಮೂಲಕ ಸತೀಶ್ ಪ್ರತಿಭೆಯ ಮತ್ತೊಂದು ಮಗ್ಗುಲಿನ ಪರಿಚಯವಾಗಿತ್ತು. ಅವರೀಗ ಬ್ರಹ್ಮಚಾರಿ ಮೂಲಕ ಮತ್ತೆ ನಗುವಿನ ಸೆಲೆ ಚಿಮ್ಮಿಸಲು ಅಣಿಗೊಂಡಿದ್ದಾರೆ. ಬ್ರಹ್ಮಚಾರಿ ಅಯೋಗ್ಯ ನಂತರದಲ್ಲಿ ಸತೀಶ್ ಅವರ ಕೈ ಹಿಡಿದಿರೋ ಗೆಲುವಿನ ಸರಣಿಯನ್ನು ಮುಂದುವರೆಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.