ಈಗ ಕನ್ನಡ ಚಿತ್ರರಂಗದ ಚಹರೆಯೇ ಬದಲಾಗಿ ಹೋಗಿದೆ. ಒಂದು ಕನ್ನಡ ಚಿತ್ರ ತೆರೆಗಾಣುತ್ತಿದೆಯೆಂದರೆ ಅದರ ಸದ್ದೀಗ ಪರಭಾಷೆಗಳಲ್ಲಿಯೂ ಮಾರ್ಧನಿಸುತ್ತದೆ. ಆದರೆ ಈಗ್ಗೆ ಒಂದು ದಶಕದಷ್ಟು ಹಿಂದಿನ ಸ್ಥಿತಿಗತಿಗಳನ್ನೊಮ್ಮೆ ರಿವೈಂಡ್ ಮಾಡಿಕೊಂಡರೆ ಪರಿಸ್ಥಿತಿ ಕೊಂಚ ಹೀನಾಯವಾಗಿತ್ತು. ತಮಿಳು ಮುಂತಾದ ಭಾಷಿಗರ ಪಾಲಿಗೆ ಕನ್ನಡ ಸಿನಿಮಾಗಳು ಲೇವಡಿ ಮಾಡುವ ಸರಕಾಗಿಯಷ್ಟೇ ಉಳಿದುಕೊಂಡಿದ್ದವು. ಪರಭಾಷಾ ನೆಲದಲ್ಲಿ ಇಂಥಾ ಅವಮಾನ ಅನುಭವಿಸಿ ಬಂದ ಅನೇಕರು ಮೌಲ್ಯಯುತವಾದ ಸಿನಿಮಾ ರೂಪುಗೊಳಿಸುವಲ್ಲಿ ಗಣನೀಯವಾಗಿ ಶ್ರಮಿಸಿದ್ದಾರೆ. ಈ ವಾರ ತೆರೆಗಾಣಲಿರುವ ಆಸಿಂಕೋಜಿಲ್ಲ ಎಂಬ ವಿಶಿಷ್ಟ ಸಿನಿಮಾ ಸೃಷ್ಟಿಯಾದದ್ದರ ಹಿಂದೆಯೂ ಅಂಥಾದ್ದೇ ಅವಮಾನದ ಕಥೆಯಿದೆ.
Advertisement
ಇದನ್ನು ನಿರ್ದೇಶನ ಮಾಡಿರುವವರು ಶಮನ್. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು ಆರಂಭದಿಂದಲೂ ಅತೀವವಾದ ಸಿನಿಮಾ ವ್ಯಾಮೋಹವನ್ನು ಸಾಕಿಕೊಂಡಿದ್ದವರು ಶಮನ್. ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿಕೊಂಡು ನಿರ್ದೇಶನದಲ್ಲಿ ಉಪೇಂದ್ರ ಮತ್ತು ನಟರಲ್ಲಿ ಶಿವರಾಜ್‍ಕುಮಾರ್‍ರನ್ನು ಆರಾಧಿಸುತ್ತಲೇ ಬೆಳೆದು ಬಂದಿದ್ದ ಅವರಿಗೆ ಓದು ಮುಗಿಸಿಕೊಂಡು ಸೀದಾ ಗಾಂಧಿನಗರದ ಗರ್ಭ ಸೇರಿಕೊಳ್ಳುವಷ್ಟು ತೀವ್ರವಾದ ಸಿನಿಮಾಸಕ್ತಿ ಇತ್ತು. ಆದರೆ ಬದುಕೆಂಬುದು ಅನಿವಾರ್ಯತೆಗಳ ಹುದುಲಿಗೆ ಸಿಲುಕಿಸಿದ್ದರಿಂದ ಬೇರೆ ದಾರಿ ಕಾಣದೆ ಅವರು ಎಂಎನ್‍ಸಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರುವಂಥಾ ಸಂದರ್ಭ ಸೃಷ್ಟಿಯಾಗಿತ್ತು.
Advertisement
Advertisement
ಹಾಗೆ ಅವರು ಚೆನೈನಲ್ಲಿ ಕೆಲಸ ಮಾಡುತ್ತಿರುವಾಗ ಸಹೋದ್ಯೋಗಿಗಳಿಂದಲೇ ‘ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆಯ ಮಾತುಗಳನ್ನು ಕೇಳಿ ಕೇಳಿ ರೋಸತ್ತು ಹೋಗಿದ್ದರಂತೆ. ಸಹೋದ್ಯೋಗಿಗಳ ಮುಂದೆ ಕನ್ನಡ ಸಿನಿಮಾಗಳ ಪರವಾಗಿ ವಕಾಲತ್ತು ವಹಿಸುತ್ತಲೇ ತಾನು ನಿರ್ದೇಶಕನಾಗಬೇಕೆಂಬ ಕನಸನ್ನು ಗಟ್ಟಿಗೊಳಿಸಿಕೊಂಡಿದ್ದ ಶಮನ್, ತೀರಾ ವಿಶೇಷವಾದ ಕಥೆಯನ್ನೇ ಸಿನಿಮಾವಾಗಿಸೋ ಹಂಬಲದೊಂದಿಗೆ ಕಾರ್ಯ ನಿರ್ವಹಿಸಲಾರಂಭಿಸಿದ್ದರು. ಅದರ ಗುಂಗಿಗೆ ಬಿದ್ದು ಕೈ ತುಂಬಾ ಸಂಬಳ ಕೊಡುತ್ತಿದ್ದ ಕೆಲಸವನ್ನೇ ಬಿಟ್ಟು ಬಂದ ಅವರು ಸೃಷ್ಟಿಸಿದ ಚಿತ್ರ ಆಸಿಂಕೋಜಿಲ್ಲ!
Advertisement
ಹೀಗೆ ಪರಭಾಷಿಕರಿಂದಾಗಲಿ, ಯಾರಿಂದಲೇ ಆಗಲಿ ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ ತೋರಿ ಬಂದಾಗ ಜಗಳವಾಡಿ ಬಿಡೋದು ಸಲೀಸು. ಆದರೆ ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ಹೊಸ ಸೃಷ್ಟಿಯ ಮೂಲಕವೇ ಉತ್ತರ ಕೊಡಲು ಮುಂದಾಗುವುದು ನಿಜಕ್ಕೂ ಸವಾಲಿನ ವಿಚಾರ. ನಿರ್ದೇಶಕ ಶಮನ್ ಅದರಲ್ಲಿ ಗೆದ್ದಿದ್ದಾರೆ. ಒಂದು ವಿಶಿಷ್ಟ ಕಥೆಯೊಂದಿಗೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಖುಷಿಗೊಳಿಸುವ ಮೂಲಕ ನಿರ್ದೇಶಕನಾಗಿಯೂ ಗೆಲುವು ದಾಖಲಿಸುವ ಆತ್ಮವಿಶ್ವಾಸವೂ ಅವರಲ್ಲಿ ಕಾಣಿಸುತ್ತಿದೆ. ಶೀರ್ಷಿಕೆಯಷ್ಟೇ ಭಿನ್ನವಾಗಿರೋ ಕಥೆಯನ್ನೊಳಗೊಂಡಿರುವ ಈ ಚಿತ್ರ ಈ ವಾರ ನಿಮ್ಮೆಲ್ಲರೆದುರು ಅನಾವರಣಗೊಳ್ಳಲಿದೆ.