ಚಿಂಗಾರಿ (Chingari) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟಿ ದೀಪಿಕಾ ಕಾಮಯ್ಯ (Deepika Kamaiah), ಇದೀಗ ಆಸ್ಟ್ರೇಲಿಯಾ (Australia) ಪೌರತ್ವ ಪಡೆದಿದ್ದಾರೆ. ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲೇ ನೆಲೆಸಿರುವ ಅವರು, ತಾವು ಆ ದೇಶದ ಪೌರತ್ವವನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಸಿಟಿಜನ್ ಶಿಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೌರತ್ವ (Citizenship) ಪಡೆದುಕೊಂಡ ಪ್ರಮಾಣಪತ್ರವನ್ನೂ ಅವರು ತೋರಿಸಿದ್ದಾರೆ. ಗೋಪಿ ಎನ್ನುವವರ ಜೊತೆ ಮದುವೆಯಾಗಿರುವ ದೀಪಿಕಾ, ಅವರೊಂದಿಗೆ ಆಸ್ಟ್ರೇಲಿಯಾದಲ್ಲೇ ವಾಸವಿದ್ದಾರೆ. ಈ ಕಾರಣಕ್ಕಾಗಿ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಮಾನ್ಯವಾಗಿದೆ.
ಚಿಂಗಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ, ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ನಂತರ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಇದೆಲ್ಲವನ್ನೂ ಮುಗಿಸಿಕೊಂಡು ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು.