ತಮಿಳಿನ ಖ್ಯಾತ ನಟ ಸೂರ್ಯ (Surya) ನಟನೆಯ ‘ಕಂಗುವ’ (Kanguva) ಸಿನಿಮಾ ಟೀಮ್ ನಿಂದ ಭರ್ಜರಿ ಅಪ್ ಡೇಟ್ ಸಿಕ್ಕಿದೆ. ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ. ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ (OTT) ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಈ ಮಾಹಿತಿಯನ್ನು ಚಿತ್ರತಂಡವೇ ಬಹಿರಂಗ ಪಡಿಸಿದೆ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ.
ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ (Shiva) ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ (Disha Pathani) ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಕಂಗುವ’ ಚಿತ್ರವು ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.
ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿ ಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಬೇಗ ಮುಗಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.