ಕೊಪ್ಪಳ: ಜನನವಾದಾಗ 1500 ಗ್ರಾಂಗಳಿಗಿಂತಲೂ ಕಡಿಮೆ ತೂಕ. ಜನಿಸಿದ ಮೂರು ಮಕ್ಕಳು ಹೆಣ್ಣು ಎಂದು ಸುದ್ದಿ ಕೇಳಿದಾಗ ತಂದೆಗೆ ಬರಸಿಡಿಲು. ಈ ಮಕ್ಕಳು ಬದುಕುವುದೇ ಕಷ್ಟ ಎಂದಾಗ ಮತ್ತೊಂದು ಚಿಂತೆ. ಆದರೆ ಈ ಎಲ್ಲ ಚಿಂತೆಗಳು ದೂರವಾಗಿ ಕೊಪ್ಪಳದ ದಂಪತಿಯ ಮುಖದಲ್ಲಿ ಈಗ ಸಂತಸ ಮೂಡಿದೆ. ಅಷ್ಟೇ ಅಲ್ಲದೇ ಈ ತ್ರಿವಳಿಗಳ ಯಶೋಗಾಥೆಯ ಸುದ್ದಿ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ.
ಮಹಾದೇವಿ, ಸೃಷ್ಟಿ ಮತ್ತು ಲಕ್ಷ್ಮಿ ಈಗ ಒಂದು ವರ್ಷ ಮೂರು ತಿಂಗಳು. ಕಡಿಮೆ ತೂಕವನ್ನು ಹೊಂದಿದ್ದ ಈ ತ್ರಿವಳಿಗಳು ಸಾವನ್ನು ಗೆದ್ದಿದ್ದು, ಇವರ ಪುನರ್ ಜನ್ಮದ ಕಥೆಯನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್‍ಒ) ಜಗತ್ತಿಗೆ ಸಾರಲು ಮುಂದಾಗಿದೆ.
Advertisement
2016ರ ಅಕ್ಟೋಬರ್ 25 ರಂದು ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೇಣುಕಾ ಹಡಪದ್ ತ್ರಿವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದರು. ಈ ಹಿಂದೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದು, ಈಗ ತ್ರಿವಳಿ ಹೆಣ್ಣು ಮಕ್ಕಳು ಹುಟ್ಟಿದ್ದ ಸುದ್ದಿ ಕೇಳಿ ಪತಿ ಸೋಮಪ್ಪಗೆ ಬರಸಿಡಿಲು ಬಡಿದಂತಾಗಿತ್ತು. ತ್ರಿವಳಿಗಳ ತೂಕ 1500 ಗ್ರಾಂಗಿಂತಲೂ ಕಡಿಮೆ ಇದ್ದ ಕಾರಣ ಮಕ್ಕಳು ಬದುಕುವುದೇ ಕಷ್ಟ ಎಂದು ಭಾವಿಸಲಾಗುತ್ತು. ಶಿಶುಗಳ ತೂಕ ಹೆಚ್ಚಿಸಿ ಆರೈಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಖಾಸಗಿ ಆಸ್ಪತ್ರೆ ಶಿಶುಗಳನ್ನು ಬೆಚ್ಚಗೆ ಇಟ್ಟು ಆರೈಕೆ ಮಾಡುವುದಕ್ಕೆ ಲಕ್ಷಾಂತರ ರೂ. ಖರ್ಚಾಗುತಿತ್ತು. ಆದರೆ ಸೋಮಪ್ಪ ಮತ್ತು ರೇಣುಕಾ ಹಡಪದ್ ದಂಪತಿ ಒಂದು ಪೈಸೆಯೂ ಖರ್ಚು ಮಾಡದೇ ಮಕ್ಕಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಕಾಂಗರೊ ಮದರ್ ಕೇರ್ ಸಹಾಯ:
ಸೋಮಪ್ಪ ಹಡಪದ್ ದಂಪತಿಯ ಸಹಾಯಕ್ಕೆ ಬಂದಿದ್ದು `ಕಾಂಗರೊ ಮದರ್ ಕೇರ್’ ಹೆಸರಿನ ವಿಶಿಷ್ಟ ಯೋಜನೆ. ಕಡಿಮೆ ತೂಕದ ಮಕ್ಕಳ ಆರೈಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ಕಾಂಗರೊ ಮದರ್ ಕೇರ್ ಯೋಜನೆಯನ್ನು ಆರಂಭಿಸಿತ್ತು. ಭಾರತ ಮತ್ತು ಇಥಿಯೋಪಿಯಾದ ಏಳು ಸ್ಥಳಗಳಲ್ಲಿ ಈ ಯೋಜನೆಯನ್ನು ಡಬ್ಲೂಎಚ್‍ಒ ಆರಂಭಿಸಿದ್ದು, ಭಾರತದ ಮೂರು ಸ್ಥಳಗಳಲ್ಲಿ ರಾಜ್ಯದ ಕೊಪ್ಪಳವೂ ಆಯ್ಕೆ ಆಗಿತ್ತು. ಹೀಗಾಗಿ ರಾಜ್ಯದ ಆರೋಗ್ಯ ಇಲಾಖೆಯ ಜೊತೆ ಸೇರಿ ಡಬ್ಲ್ಯೂಎಚ್‍ಒ ಮಾತುಕತೆ ನಡೆಸಿ ಪೈಲಟ್ ಯೋಜನೆಯಾಗಿ ತ್ರಿವಳಿಗಳ ಆರೈಕೆ ಮಾಡಲು ಮುಂದೆ ಬಂತು.
Advertisement
ಆರಂಭದಲ್ಲಿ ಒಪ್ಪಲಿಲ್ಲ:
ಈ ಯೋಜನೆಯ ಬಗ್ಗೆ ಆರಂಭದಲ್ಲಿ ದಂಪತಿ ಒಪ್ಪಿಗೆ ಸೂಚಿಸಲಿಲ್ಲ. ಬಳಿಕ ಸಮಾಜದಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ತಿಳಿಸಲಾಯಿತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಪಡಾವೋ ಯೋಜನೆಯ ಬಗ್ಗೆಯೂ ವಿವರಿಸಲಾಯಿತು. ಹೆಣ್ಣು ಮಕ್ಕಳ ಯಶೋಗಾಥೆಯನ್ನು ವಿವರಿಸಿದ ಬಳಿಕ ಸೋಮಪ್ಪ ಮತ್ತು ರೇಣುಕಾ ಹಡಪದ್ ದಂಪತಿ ಒಪ್ಪಿಗೆ ಸೂಚಿಸಿದರು. 28 ದಿನಗಳು ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೇಣುಕಾ ಗಂಡನ ಮನೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ತವರಿಗೆ ಹೋದರು. ಪ್ರತಿ ದಿನ 9 ಗಂಟೆಗಳ ಕಾಲ ಮನೆಯಲ್ಲಿ ರೇಣುಕಾ ಮಗುವನ್ನು ಅಪ್ಪಿಕೊಂಡು ಇರುತ್ತಿದ್ದರು. ಪರಿಣಾಮ 2017ರ ಮಾರ್ಚ್ 7ರಂದು ತ್ರಿವಳಿಗಳ ತೂಕ 2500 ಗ್ರಾಂ ದಾಟಿತ್ತು.
ಮೊದಲ ಹುಟ್ಟುಹಬ್ಬ:
2017ರ ಅಕ್ಟೋಬರ್ 30 ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೇಣುಕಾ ಮತ್ತು ಕುಟುಂಬದವರು ತ್ರಿವಳಿಗಳ ಮೊದಲ ಹುಟ್ಟುಹಬ್ಬವನ್ನು ಆಚರಿಸಿದರು. ಹೆಣ್ಣು ಮಕ್ಕಳು ಎಂದು ನಿರ್ಲಕ್ಷ್ಯ ಮಾಡದಿರಿ ಎಂದು ರೇಣುಕಾ ಹೇಳಿದ್ದಾರೆ. ಈಗ ಪತ್ನಿಯ ಜೊತೆಗೆ ಪತಿ ಸೋಮಪ್ಪ ಅವರು ಹೆಣ್ಣು ಮಕ್ಕಳ ಅಗತ್ಯ ಮತ್ತು ಕಾಂಗರೊ ಮದರ್ ಕೇರ್ ಬಗ್ಗೆ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.
ಏನಿದು ಕಾಂಗರೊ ಮದರ್ ಕೇರ್?
ಕಡಿಮೆ ತೂಕದಲ್ಲಿ ಹುಟ್ಟಿದ ಮಗುವಿಗೆ ಪೋಷಕರ ಅಪ್ಪುಗೆ ಬೇಕಾಗುತ್ತದೆ. ತಂದೆ, ತಾಯಿಯ ಚರ್ಮದ ಬಿಸಿ ನಿರಂತರವಾಗಿ ನೀಡಿದರೆ ಮಗುವಿನ ಆರೋಗ್ಯ ಸುಧಾರಿಸುತ್ತದೆ. ದಿನ 24 ಗಂಟೆಯಲ್ಲಿ ಎಷ್ಟು ಹೊತ್ತು ಅಪ್ಪಿಕೊಳ್ಳಲು ಸಾಧ್ಯವಾಗುತ್ತದೋ ಅಷ್ಟು ಹೊತ್ತು ಅಪ್ಪಿಕೊಂಡರೆ ಮಗುವಿನ ಆರೋಗ್ಯ ಸುಧಾರಿಸುತ್ತದೆ. ಈ ರೀತಿ ಅಪ್ಪಿಕೊಂಡು ಮಗವನ್ನು ಆರೈಕೆ ಮಾಡುವುದಕ್ಕೆ ಕಾಂಗರೊ ಮದರ್ ಕೇರ್ ಎಂದು ಕರೆಯಲಾಗುತ್ತದೆ.
ವಿಶ್ವಕ್ಕೆ ಮಾದರಿ:
ಭಾರತ ಮತ್ತು ಇಥಿಯೋಪಿಯಾದಲ್ಲಿ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ತ್ರಿವಳಿಗಳ ಯಶೋಗಾಥೆಯನ್ನು ವಿಶ್ವಕ್ಕೆ ಪ್ರಚಾರ ಮಾಡಲಾಗುವುದು ಎಂದು ಡಬ್ಲೂಎಚ್‍ಒ ನವಜಾತ ಶಿಶು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಂಯೋಜಕ ಡಾ.ರಾಜೀವ್ ಬಾಲ್ ಹೇಳಿದ್ದಾರೆ.
ಬಿಲ್‍ಗೇಟ್ಸ್ ಅನುದಾನ:
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಬಿಲ್ ಆಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ಧನ ಸಹಾಯದ ಅಡಿ ವಿಶ್ವ ಆರೋಗ್ಯ ಸಂಸ್ಥೆ ದೇಶದ ಮೂರು ಜಿಲ್ಲೆ ಮತ್ತು ಇಥಿಯೋಪಿಯಾದ 14 ಕಡೆ ಕಾಂಗರೊ ಮದರ್ ಕೇರ್ ಪೈಲಟ್ ಯೋಜನೆಯನ್ನು ಆರಂಭಿಸಿದೆ.