ಬಾಲಿವುಡ್ ನಟಿ ಕಂಗನಾ ರಣಾವತ್ ಸೆಲೆಬ್ರೆಟಿ ಆಗಿರಬಹುದು. ಆದರೆ ಈಕೆ ಒಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ ಎಂದು ಮುಂಬೈ ಕೋರ್ಟ್ ಹೇಳಿದೆ.
ಪ್ರಕರಣವೇನು?: ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಕಂಗನಾ ರಣಾವತ್, ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಅವರ ಖ್ಯಾತಿಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ್ದರು. ಈ ಸಂದರ್ಶನ ವೀಡಿಯೋ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆಗಳನ್ನು ಗಳಿಸಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಕಂಗನಾ ರಣಾವತ್ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದಿದ್ದಾರೆ. ಇದರಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜಾವೇದ್ ಅಖ್ತರ್ ಅವರು 2020ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್
ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಶಾಶ್ವತ ವಿನಾಯಿತಿ ನೀಡುವಂತೆ ಕಂಗನಾ ಅವರು ಮನವಿ ಮಾಡಿದ್ದರು. ಹಿಂದಿ ಸಿನಿಮಾ ಕ್ಷೇತ್ರದ ದೊಡ್ಡ ನಟಿಯರ ಪೈಕಿ ತಾವು ಒಬ್ಬರಾಗಿದ್ದು, ದೇಶ ಮತ್ತು ವಿದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿರಬೇಕಾಗುತ್ತದೆ. ಹೀಗಾಗಿ ಕೋರ್ಟ್‌ಗೆ ಹಾಜರಾಗುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ
ಕೋರ್ಟ್ ಹೇಳಿದ್ದೇನು?: ನಟಿಯ ಮನವಿ ತಿರಸ್ಕರಿಸಿದ ಸ್ಥಳೀಯ ನ್ಯಾಯಾಲಯ, ಕಂಗನಾ ರಣಾವತ್ ಸೆಲೆಬ್ರಿಟಿಯಾಗಿರಬಹುದು, ವೃತ್ತಿಪರ ಹುದ್ದೆಗಳನ್ನು ಹೊಂದಿರಬಹುದು, ಆದರೆ ಅವರು ಪ್ರಕರಣವೊಂದರಲ್ಲಿ ಆರೋಪಿ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಕಂಗನಾ ಸೆಲೆಬ್ರಿಟಿಯಾದ ಕಾರಣ ವಿಚಾರಣೆಯ ಹಾಜರಾತಿಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿದೆ.
ಆರೋಪಿಯು ತನಗಿಷ್ಟವಾದ ರೀತಿಯಲ್ಲಿ ಈ ಪ್ರಕರಣದ ವಿಚಾರಣೆಗೆ ತನ್ನದೇ ಆದ ನಿಯಮಗಳನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಆರೋಪಿಯು ಶಾಶ್ವತ ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ಆರೋಪಿಯು ಕಾನೂನಿನ ನೀತಿ-ನಿಯಮಗಳನ್ನು ಅನುಸರಿಸಬೇಕು. ಇದುವರೆಗೆ ಗೈರಾದ ದಿನಾಂಕಗಳಿಗೆ ಕಂಗನಾರ ಕೋರಿಕೆ ಮೇರೆಗೆ ಯಾವುದೇ ದಂಡ ವಿಧಿಸದೆ ಅನುಮತಿ ನೀಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಆರ್ಆರ್ಖಾನ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಕಂಗನಾ ಅವರು ತಮ್ಮ ವೃತ್ತಿಪರ ಬದ್ಧತೆಗಳನ್ನು ಉಲ್ಲೇಖಿಸಿ ವಿಚಾರಣೆಗೆ ಹಾಜರಾಗಲು ಶಾಶ್ವತ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.