ಬಾಲಿವುಡ್ (Bollywood) ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹಾರ್ (Karan Johar) ಕಂಡರೆ ಕಂಗನಾ ರಣಾವತ್ (Kangana Ranaut) ಗೆ ಅದೇನಾಗತ್ತೋ ಗೊತ್ತಿಲ್ಲ. ಕರಣ್ ಹೆಸರು ಕೇಳಿ ಬಂದಾಗೆಲ್ಲ ಕಂಗನಾ ಕೆಂಡವಾಗುತ್ತಾರೆ. ಅದರಲ್ಲೂ ಕರಣ್ ಬಗ್ಗೆ ಯಾರಾದರೂ ನೆಗೆಟಿವ್ ಮಾತನಾಡಿದರೆ, ಅವರ ಬೆನ್ನಿಗೆ ನಿಲ್ಲುತ್ತಾರೆ. ಇದೀಗ ಹಳೆ ವಿಡಿಯೋ ವಿಚಾರವಾಗಿ ಮತ್ತೆ ಗುಡುಗಿದ್ದಾರೆ ಬಿಟೌನ್ ಅಂದಗಾತಿ ಕಂಗನಾ.
2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್ ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು.
ಈ ವಿಚಾರವಾಗಿ ಕಂಗನಾ ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ‘ಕರಣ್ ಜೋಹಾರ್ ಇಂತಹ ಕೆಲಸಗಳನ್ನು ಮಾಡಲು ಫೇಮಸ್. ಯಾರದ್ದೆಲ್ಲ ಕರಿಯರ್ ನಾಶ ಮಾಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ. ಇಂತಹ ಕೆಲಸ ಮಾಡಲೆಂದು ಅವರು ಇರುವುದು’ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಂಗನಾ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹಾರ್ ಬಗ್ಗೆ ಮತ್ತಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಬರೆಯಲಾಗುತ್ತಿದೆ. ಯಾರಿಗೆಲ್ಲ ಕರಣ್ ತೊಂದರೆ ಕೊಟ್ಟಿದ್ದಾರೆ ಎನ್ನುವ ಒಂದೊಂದೇ ಹೆಸರುಗಳನ್ನು ನೆಟ್ಟಿಗರು ಹಾಕುತ್ತಿದ್ದಾರೆ. ಅಲ್ಲಿಗೆ ಕಂಗನಾ ಹೊಡೆದ ಕಲ್ಲು ಹಲವು ದಿಕ್ಕುಗಳನ್ನು ಆವರಿಸುತ್ತಿದೆ.