ಕಾರವಾರ: ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಕಾರವಾರದ ಕಾಳಿ ದ್ವೀಪದಲ್ಲಿ ಆರಂಭಿಸಿದ್ದ ಕಾಂಡ್ಲಾ ನಡಿಗೆ ಸೂಕ್ತ ನಿರ್ವಹಣೆ ಕಾಣದೆ ಪಾಳು ಬಿದ್ದಿದೆ.
2020–21ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ಸುಮಾರು 20 ಲಕ್ಷ ವೆಚ್ಚದಲ್ಲಿ 240 ಮೀಟರ್ ಉದ್ದದ ಕಾಂಡ್ಲಾ ನಡಿಗೆ (Kandla Boardwalk) ಪಥ ನಿರ್ಮಿಸಲಾಗಿತ್ತು. ಕೆಲ ದಿನಗಳವರೆಗೆ ಉತ್ತಮವಾಗಿ ನಡೆದಿದ್ದ ಪಥವು ನಂತರ ನಿರ್ವಹಣೆ, ಪ್ರಚಾರ ಇಲ್ಲದೆ ಸೊರಗಿದೆ.
Advertisement
Advertisement
ನಡುಗಡ್ಡೆಯಲ್ಲಿರುವ ಕಾಳಿಕಾಮಾತಾ ದೇವಾಲಯದ ಸಮೀಪ ನದಿಯ ಅಂಚಿನಲ್ಲಿ ಕಾಂಡ್ಲಾ ನಡಿಗೆಗೆ ಅನುಕೂಲವಾಗುವಂತೆ ಮರದ ಹಲಗೆಗಳನ್ನು ಒಟ್ಟೊಟ್ಟಾಗಿ ಜೋಡಿಸಿ ಸೇತುವೆ ನಿರ್ಮಿಸಲಾಗಿದೆ. ಸಿಮೆಂಟ್ ಕಂಬಗಳನ್ನು ಆಧರಿಸಿ ಇದು ನಿಂತಿದೆ. ಅಲ್ಲಲ್ಲಿ ಮರದ ಹಲಗೆಗಳು ಮುರಿದು ಬಿದ್ದಿದ್ದರೆ, ಮತ್ತೆ ಕೆಲವೆಡೆ ದುರ್ಬಲ ಸ್ಥಿತಿಯಲ್ಲಿವೆ. ಹೀಗಾಗಿ, ‘ನಿರ್ವಹಣೆ ಕಾರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಎಚ್ಚರಿಕೆ ಫಲವನ್ನು ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.
Advertisement
‘ಕಾಳಿನದಿಯ ಮಧ್ಯಭಾಗದಲ್ಲಿ ಕಾಂಡ್ಲಾಗಿಡಗಳ ನಡುವೆ ತಂಪನೆಯ ವಾತಾವರಣದಲ್ಲಿ ಮರದ ಹಲಗೆಗಳ ಸೇತುವೆ ಮೇಲೆ ನಡೆಯುತ್ತ ಸಾಗುವದು ರೋಮಾಂಚನಕಾರಿ ಅನುಭವ ನೀಡುತ್ತದೆ. ಇಂಥ ಸೌಲಭ್ಯ ಬಳಸಿಕೊಂಡು ಪ್ರವಾಸಿಗರನ್ನು ಸೆಳೆಯುವ ಅಪರೂಪದ ಅವಕಾಶವನ್ನೂ ಕೈಚೆಲ್ಲಲಾಗಿದೆ. ದೂರದ ಊರಿನ ಪ್ರವಾಸಿಗರಿಗೆ ಹಾಗಿರಲಿ, ಕಾರವಾರದ ಜನರಿಗೇ ಕಾಂಡ್ಲಾ ನಡಿಗೆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ ಕೋಡಿಬಾಗದ ಹರೀಶ ಸಾರಂಗ್.
Advertisement
‘ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಕಾಂಡ್ಲಾ ನಡಿಗೆ ಪಥ ದುಸ್ಥಿತಿಯಲ್ಲಿದೆ. ಅದನ್ನು ಸರಿಯಾಗಿ ನಿರ್ವಹಣೆಯನ್ನೇ ಮಾಡಿಲ್ಲ. ಸುತ್ತಮುತ್ತಲಿನ ರೆಸಾರ್ಟ್, ಹೋಮ್ ಸ್ಟೇಗಳಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರನ್ನು ಇಲ್ಲಿಗೆ ಕರೆತರಲಾಗುತ್ತಿತ್ತು. ಸೌಕರ್ಯ ಹಾಳಾಗಿದ್ದರಿಂದ ಈಗ ಅವರು ಪ್ರವಾಸಿಗರನ್ನು ಕರೆತರುವುದನ್ನೂ ನಿಲ್ಲಿಸಿದ್ದಾರೆ’ ಎನ್ನುತ್ತಾರೆ ನಂದನಗದ್ದಾದ ಕಲ್ಪೇಶ್ ನಾಯ್ಕ.
ಕಾಂಡ್ಲಾ ಪಥವನ್ನು ದುರಸ್ತಿಪಡಿಸುವ ಕೆಲಸ ಶೀಘ್ರದಲ್ಲಿ ನಡೆಸಲಾಗುತ್ತದೆ. ನತರ ಪ್ರವಾಸಿಗರ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಆರ್.ಎಫ್.ಒ ಕಿರಣ್ ಹೇಳುತ್ತಾರೆ.