ಹಾವೇರಿ: ಸ್ವಚ್ಛ ನಗರಿ, ಸುಂದರ ನಗರಿ ಆಗಬೇಕು ಎಂದು ಎಲ್ಲರೂ ಭಾಷಣಗಳಲ್ಲಿ ಹೇಳುತ್ತಾರೆಯೇ ಹೊರತು ಕಾರ್ಯರೂಪಕ್ಕೆ ತರೋರು ಮಾತ್ರ ತೀರಾ ಕಡಿಮೆ. ಆದರೆ ‘ಕನಸಿನ ರಾಣೇಬೆನ್ನೂರು’ ತಂಡ ಸದ್ದಿಲ್ಲದೇ ಸ್ವಚ್ಛ ಮತ್ತು ಸುಂದರ ನಗರಿ ಮಾಡೋ ಕನಸು ಹೊತ್ತು ಫೀಲ್ಡ್ ಗೆ ಇಳಿದು ಪಬ್ಲಿಕ್ ಹಿರೋ ಆಗಿದೆ.
ಈ ತಂಡದ ಸದಸ್ಯರು ಪ್ರತಿ ವಾರವೂ ಒಂದು ವಾರ್ಡಿಗೆ ತೆರಳಿ ಸ್ವಚ್ಛತೆ ಮಾಡುತ್ತಾರೆ. ಅಲ್ಲದೆ ಕರಪತ್ರಗಳನ್ನ ಹಿಡಿದು ಮನೆ ಮನೆಗೆ ತೆರಳಿ ಸ್ವಚ್ಛ ಮತ್ತು ಸುಂದರ ನಗರಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ತಂಡದಲ್ಲಿ ಇಂಜಿನಿಯರ್ ಗಳು, ವೈದ್ಯರು, ಹಲವು ಕಾರ್ಯಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಇದ್ದಾರೆ. ಇವರು ‘ಕನಸಿನ ರಾಣೆಬೆನ್ನೂರು’ ಎಂಬ ತಂಡ ಕಟ್ಟಿಕೊಂಡು ನಗರವನ್ನ ಸ್ವಚ್ಛ ಮತ್ತು ಸುಂದರ ನಗರಿ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಈ ಉತ್ಸಾಹಿಗಳು ಭಾನುವಾರ ಬಂತು ಅಂದರೆ ಬೀದಿಗೆ ಇಳಿದು, ಸ್ವಚ್ಛತಾ ಕಾರ್ಯವನ್ನು ಮಾಡುತ್ತಾರೆ.
Advertisement
Advertisement
ಸದಸ್ಯರಿಗಾಗಿ ಕನಸಿನ ರಾಣೆಬೆನ್ನೂರು ತಂಡ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದೆ. ನಗರದ ಯಾವೆಲ್ಲಾ ಪ್ರದೇಶದಲ್ಲಿ ಸಮಸ್ಯೆ ಇದೆ ಎಂಬ ಬಗ್ಗೆ ಗ್ರೂಪ್‍ನಲ್ಲಿ ಚರ್ಚೆ ನಡೆಸುತ್ತಾರೆ. ಬಳಿಕ ಪ್ರತಿ ಭಾನುವಾರ ಎಲ್ಲರೂ ಸೇರಿಕೊಂಡು ಸಮಸ್ಯೆ ಇದ್ದ ಪ್ರದೇಶಕ್ಕೆ ಹೋಗಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಬೀದಿಬದಿಯ ಗೋಡೆಗಳನ್ನು ಕ್ಲೀನ್ ಮಾಡಿ, ಸ್ವಚ್ಛತೆಯ ಅರಿವು ಮೂಡಿಸುವ ಪೋಸ್ಟರ್ ಹಾಕುತ್ತಾರೆ.
Advertisement
ಅಷ್ಟೇ ಅಲ್ಲ, ಎಲ್ಲೆಂದರಲ್ಲಿ ಕಸ ಹಾಕುವುದು, ಮರ ಕಡಿಯೋದು, ಅಡಿಕೆ ಎಲೆ ಅಗೆದು ಉಗಿಯೋದು, ಬೇಕಾಬಿಟ್ಟಿ ವಾಹನ ನಿಲ್ಲಿಸಿದ್ದು ಕಂಡರೆ ಇವರೆಲ್ಲಾ ಹೋಗಿ ಕರಪತ್ರ ಹಂಚಿ, ಅರಿವು ಮೂಡಿಸೋ ಕೆಲಸ ಮಾಡುತ್ತಾರೆ. ನಗರದ ಸ್ವಚ್ಛತೆ ಬಗ್ಗೆ ತಿಳಿ ಹೇಳುತ್ತಾರೆ.
Advertisement
ಕನಸಿನ ರಾಣೆಬೆನ್ನೂರು ತಂಡಕ್ಕೆ ನಗರಸಭೆಯೂ ಸಾಥ್ ಕೊಟ್ಟು ನಗರವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಿದೆ. ಈ ತಂಡದಲ್ಲಿ ಒಟ್ಟು 50 ಮಂದಿ ಸದಸ್ಯರಿದ್ದು, ಇವರ ಸೇವಾ ಕಾರ್ಯ ಇತರರಿಗೆ ಸ್ಫೂರ್ತಿಯಾಗಿದೆ. ಎಲ್ಲಾ ನಗರ ಹಳ್ಳಿಗಳಲ್ಲಿ ಇಂತಹ ತಂಡ ಹುಟ್ಟಿಕೊಂಡರೆ ಸ್ಚಚ್ಛ ಕರ್ನಾಟಕವನ್ನು ಮಾಡುವುದು ಕಷ್ಟದ ಕೆಲಸವಲ್ಲ. ಸ್ವರ್ಥವಿಲ್ಲದೆ ತಮ್ಮ ನಗರ ಸುಂದರವಾಗಿ, ಸ್ವಚ್ಛವಾಗಿರಲಿ ಎಂದು ಕನಸಿನ ರಾಣೇಬೆನ್ನೂರು ತಂಡ ಕೆಲಸ ಮಾಡುತ್ತಿರೋದು ಎಲ್ಲರ ಮನ ಗೆದ್ದಿದೆ.