ಬೆಂಗಳೂರು: ಈ ಹಿಂದೆ ಕನಕಪುರದ ಆಡಳಿತದಲ್ಲಿ ಹಿಡಿತ ಹೊಂದಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪವರ್ ತಿಹಾರ್ ಜೈಲಿಗೆ ಹೋದ ಬಳಿಕ ಕೊಂಚ ಕಡಿಮೆಯಾಗುತ್ತದೆಯಾ ಅನ್ನೋ ಪ್ರಶ್ನೆ ಮೂಡಿದೆ.
ಹೌದು. ಡಿಕೆಶಿ ಜೈಲಿಗೋಗಿ ಬರುತ್ತಿದ್ದಂತೆಯೇ ಕನಕಪುರ ಬದಲಾಗಿದೆ. 5 ವರ್ಷಗಳಿಂದ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸಿದ್ದು ಯುವ, ಖಡಕ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. ಡಿಸಿ, ಎಸ್ಪಿ, ಜಿ.ಪಂ. ಸಿಇಒ, ಇನ್ಸ್ ಪೆಕ್ಟರನ್ನು ಕೂಡ ಬದಲಾವಣೆ ಮಾಡಲಾಗಿದೆ.
ಬದಲಾವಣೆಯಾದ ಅಧಿಕಾರಿಗಳು ಯಾರು?
ಕ್ಯಾ. ರಾಜೇಂದ್ರಕುಮಾರ್ ಜಿಲ್ಲಾಧಿಕಾರಿಯಾಗಿದ್ದು ಈಗ ಡಿಸಿಯಾಗಿ ಅರ್ಚನಾ ನೇಮಕಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಾನಂದೂರು ರಮೇಶ್ ಅವರನ್ನು ವರ್ಗಾವಣೆ ಮಾಡಿದ್ದು ಎಸ್‍ಪಿಯಾಗಿ ಡಾ. ಅನೂಪ್ ಶೆಟ್ಟಿ ನೇಮವಾಗಿದ್ದಾರೆ. ಈ ಹಿಂದೆ ಮುಲ್ಲೈ ಮುಹಿಲಿನ್ ಮತ್ತು ಜಯವಿಭವ ಸ್ವಾಮಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದರೆ ಈಗ ಈ ಹುದ್ದೆಗೆ ಮೊಹಮ್ಮದ್ ಇಕ್ರಂ ನಿಯೋಜನೆಗೊಂಡಿದ್ದಾರೆ. ಮಲ್ಲೇಶ್ ಅವರು ಕನಕಪುರದ ಇನ್ಸ್ ಪೆಕ್ಟರ್ ಆಗಿದ್ದರೆ ಈಗ ಈ ಜಾಗಕ್ಕೆ ಪ್ರಕಾಶ್ ಬಂದಿದ್ದಾರೆ. ಇದನ್ನೂ ಓದಿ: ಬಂಡೆ ಕ್ಷೇತ್ರದಲ್ಲಿ ಅರಳಿದ ಕಮಲ – ಕನಕಪುರದಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ
ಡಿಕೆಶಿ ಡೋಂಟ್ ಕೇರ್:
ಇಷ್ಟೆಲ್ಲಾ ಬದಲಾವಣೆಗಳಾದರೂ ಡಿಕೆಶಿ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಐ ನೋ ಹೌ ಟು ಹ್ಯಾಂಡಲ್ ಸಿಸ್ಟಂ. ಯಾರ್ ಬಂದರೆ ನನಗೇನೂ ಆಗ್ಬೇಕು. ನಾನೇನ್ ದಂಧೆ ಮಾಡ್ತಾ ಇದ್ದೀನಾ? ಬಾರ್ ನಡೆಸುತ್ತಿದ್ದೀನಾ? ಇಸ್ಪೀಟ್ ದಂಧೆ ನಡೆಸ್ತೀದ್ದೀನಾ? ನಾನು ಯಾರೊಬ್ಬರಿಗೂ ಕಾಲ್ ಮಾಡಿ ಕೆಲಸ ಮಾಡಿಕೊಡಿ ಅಂದಿದ್ನಾ ಎಂದು ಪ್ರಶ್ನೆಗಳ ಸುರಿಮಳೆ ಸುರಿಸುವ ಮೂಲಕ ಡಿಕೆಶಿ ಅಧಿಕಾರಿಗಳ ಬದಲಾವಣೆಗೆ ಟಾಂಗ್ ನೀಡಿದ್ದಾರೆ.
ನಾನೆಂದೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಯಾರೇ ಬಂದರೂ ನನಗೆ ಹ್ಯಾಂಡಲ್ ಮಾಡೋದು ಗೊತ್ತು. ನನ್ನ ಅಧಿಕಾರ ಮೀರಿ ಕೆಲಸ ಮಾಡಿಲ್ಲ. ಈ ಹಿಂದೆ ನನ್ನ ಜೊತೆ ಇದ್ದ ಅಧಿಕಾರಿಗಳು ಈಗ ಬಿಎಸ್‍ವೈ ಜೊತೆ ಇದ್ದಾರೆ. ನನ್ನ ಅಧಿಕಾರವದಿಯಲ್ಲಿ ಇಂಧನ ಇಲಾಖೆ, ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಹಗರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ನಾನು ಜೈಲಲ್ಲಿ ಇದ್ದಾಗ ಇಡಿ ಅಧಿಕಾರಿಗಳು ಹೇಳಿದ್ರು. ಆಗ ನಾನು ಮಾಡ್ಕೊಳ್ಳಿ ಅಂದೆ. ನಾನೇನು ಇದಕ್ಕೆಲ್ಲ ಹೆದರಲ್ಲ ಎಂದರು.
ಕನಕಪುರ ಕಾರ್ಯಕರ್ತರ ಸಭೆಯಲ್ಲೂ ಮಾಜಿ ಸಚಿವರು ಮೆದು ಮಾತುಗಳನ್ನು ಆಡಿದ್ದಾರೆ. ಹೊಸ ಅಧಿಕಾರಿಗಳಿಗೆ ಕನಕಪುರದ ಬಗ್ಗೆ ಗೊತ್ತಿಲ್ಲ. ನಮಗೂ ರಾಜಕೀಯ ಗೊತ್ತಿದೆ. ಕಾಲ ಹೀಗೆಯೇ ಇರುವುದಿಲ್ಲ, ಕಾಲಚಕ್ರ ಉರುಳಲಿದೆ ಎಂದು ಡಿಕೆಶಿ ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.