ರಾಮನಗರ: ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಗಣೇಶ್‍ರನ್ನು ಕೊನೆಗೂ ಬಿಡದಿ ಪೊಲೀಸರು ಬಂದಿದ್ದಾರೆ.
ಗುಪ್ತ ಸ್ಥಳದಲ್ಲಿ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಅಲ್ಲಿಂದ ಬೆಂಗಳೂರಿಗೆ ಕರೆ ತರಲಾಗುತ್ತದೆ. ಬಂಧನದ ಬಗ್ಗೆ ಪಬ್ಲಿಕ್ ಟಿವಿಗೆ ಐಜಿಪಿ ದಯಾನಂದ್ ಖಚಿತ ಪಡಿಸಿದ್ದಾರೆ.
ಗಣೇಶ್ ರನ್ನು ಬಂಧಿಸಿರುವ ಪೊಲೀಸರು ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ ಎಂಬ ಮಾಹಿತಿ ಲಭಿಸಿದೆ. ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡುತ್ತಾರಾ ಎಂಬ ಅಂಶ ಕುತೂಹಲ ಮೂಡಿಸಿದೆ. ಇಂದು ಸಂಜೆ ಗಣೇಶ್ ಬೆಂಗಳೂರಿಗೆ ಕರೆತರುವ ನಿರೀಕ್ಷೆ ಇದ್ದು, ಜನಪ್ರತಿನಿಧಿ ಆಗಿರುವ ಕಾರಣ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಹಾಜರು ಪಡಿಸಲಾಗುತ್ತದೆ.
ಬರೋಬ್ಬರಿ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಗಣೇಶ್‍ರನ್ನು ಬಂಧಿಸಲು ಬಿಡದಿ ಪೊಲೀಸರು 3 ವಿಶೇಷ ತಂಡಗಳನ್ನು ರಚನೆ ಮಾಡಿ ಹುಡುಕಾಟ ನಡೆಸಿದ್ದರು. ಈ ಕೃತ್ಯದಿಂದ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಭಾರೀ ತೀವ್ರ ಮುಜುಗರ ಆಗಿತ್ತು. ಅಲ್ಲದೇ ಪ್ರಕರಣದಲ್ಲಿ ರಾಜಿ ಸಂಧಾನ ನಡೆಸಲು ಸಚಿವ ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದರು. ಈ ಸಂಧಾನಕ್ಕೆ ಶಾಸಕ ಆನಂದ್ ಸಿಂಗ್ ಪತ್ನಿ ಹಾಗೂ ಕುಟುಂಬ ಒಪ್ಪಿಗೆ ನೀಡದ ಕಾರಣ ನಾಯಕರಿಗೆ ತೀವ್ರ ಮುಜುಗರ ಉಂಟಾಗಿತ್ತು.
ರಾಜ್ಯ ಗೃಹ ಇಲಾಖೆ ಗಣೇಶ್ ಅವರನ್ನು ಬಂಧನ ಮಾಡಲು ಹಿಂದೇಟು ಹಾಕಿತ್ತು ಎಂಬ ಅನುಮಾನ ಕೂಡ ವ್ಯಕ್ತವಾಗಿತ್ತು. ಈಗಾಗಲೇ ನ್ಯಾಯಾಲಯದಲ್ಲಿ ಶಾಸಕ ಜಾಮೀನು ಅರ್ಜಿ ಸಲ್ಲಿಸಿದ್ದು, ಸದ್ಯ ಆನಂದ್ ಸಿಂಗ್ ಆಸ್ಪತ್ರೆಯಿಂದ ಮನೆಗೆ ತೆರಳಿರುವ ಕಾರಣ ಜಾಮೀನು ಲಭಿಸುವುದು ಸುಲಭ ಎಂಬ ಹಿನ್ನೆಲೆಯಲ್ಲಿ ಗಣೇಶ್ ಅವರ ಬಂಧನವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.
ಮಂಗಳವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಗಣೇಶ್ ಅವರ ಕುಟುಬವನ್ನು ಭೇಟಿ ಮಾಡಿ ಮಾತುಕೆ ನಡೆಸಿದ್ದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಗಣೇಶ್ ಶಾಸಕರಾಗುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೇ ಸದ್ಯ ಪೊಲೀಸರು ಗಣೇಶ್ ಅವರನ್ನು ಬಂಧಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ. ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv