ಮಂಗಳೂರು: ಮೂಡಬಿದ್ರೆಯಲ್ಲಿ ನಡೆಯುತ್ತಿರುವ 14 ನೇ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಪ್ರಮುಖ ಕಾರ್ಯಕ್ರಮ ಕೃಷಿಸಿರಿಯಾಗಿದೆ. ಇದರ ಪ್ರಯುಕ್ತ ಕೋಣಗಳ ಕಂಬಳ ನಡೆದಿದ್ದು, ಎಣ್ಣೆ ತಿಕ್ಕಿಸಿಕೊಂಡು, ಸಿಂಗಾರಗೊಂಡಿದ್ದ ಜೋಡಿ ಕೋಣಗಳು ಪ್ರೇಕ್ಷಕರ ಮುಂದೆ ತಮ್ಮ ಸೌಂದರ್ಯ ಪ್ರದರ್ಶಿಸಿದವು.
ಮಂಗಳೂರಿನ ಮೂಡಬಿದ್ರೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಭಾಗವಾದ ಕೃಷಿಸಿರಿಯಲ್ಲಿ ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು. ಕೃಷಿಸಿರಿಯ ಕಾರ್ಯಕ್ರಮಗಳಲ್ಲಿ ಒಂದಾದ ಕಂಬಳ ಓಟದ ಕೋಣಗಳ ಸೌಂದರ್ಯ ಸ್ಪರ್ಧೆಯಲ್ಲಿ ಸುಮಾರು 8 ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು. ಸ್ಪರ್ಧೆ ಆರಂಭಕ್ಕೂ ಮುನ್ನ ಮೆರವಣಿಗೆಯಲ್ಲಿ ಈ ಕೋಣಗಳನ್ನು ಕರೆತಂದಿದ್ದು, ಬಳಿಕ ಬಾಡಿ ಬಿಲ್ಡರ್‍ಗಳಂತೆ ತಮ್ಮ ಕಟ್ಟುಮಸ್ತಾದ ದೇಹ ಸೌಂದರ್ಯವನ್ನು ನೆರೆದ ಜನರ ಮುಂದೆ ಪ್ರದರ್ಶಿಸಿದವು.
Advertisement
Advertisement
ಸ್ಪರ್ಧೆಯಲ್ಲಿ ಭಾಗಿಯಾದ ಕೋಣಗಳನ್ನು ಕಂಬಳದ ದಿನದಂದು ಓಟಕ್ಕೆ ಸಿದ್ಧಪಡಿಸುವಂತೆ ಶೃಂಗಾರಗೊಳಿಸಲಾಗಿತ್ತು. 8 ಜೋಡಿಗಳ ದೇಹ ಸೌಂದರ್ಯ ಹಾಗೂ ಶೃಂಗಾರಗೊಳಿಸಿದ ರೀತಿಯನ್ನು ನೋಡಿ ತೀರ್ಪಗಾರರು ಗುರುತಿಸಿದ ಮೂರು ಜೋಡಿಗಳಿಗೆ ಬಹುಮಾನ ನೀಡಲಾಯಿತು.
Advertisement
ಮೊದಲ ಸ್ಥಾನಕ್ಕೆ 50,000 ರೂ., ದ್ವಿತೀಯ ಸ್ಥಾನಕ್ಕೆ 30,000 ರೂ. ಹಾಗೂ ಮೂರನೇ ಸ್ಥಾನಕ್ಕೆ 20,000 ರೂ. ಹೀಗೆ ಒಟ್ಟು 1 ಲಕ್ಷ ರೂ. ಬಹುಮಾನವನ್ನು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಕೋಣಗಳ ಮಾಲೀಕರಿಗೆ ವಿತರಿಸಲಾಯಿತು. ಕಂಬಳದ ಕೋಣಗಳನ್ನು ಕೇವಲ ಕಂಬಳ ಇದ್ದಾಗ ಮಾತ್ರ ಹೊರತರುತ್ತಿದ್ದ ಮಾಲೀಕರು ಕಂಬಳದಂತೆಯೇ ಸಮ್ಮೇಳನಕ್ಕೆ ಶೃಂಗರಿಸಿ ಸ್ಪರ್ಧೆಗಾಗಿ ಕರೆತಂದಿದ್ದರು.
Advertisement
ಕಂಬಳದಲ್ಲಿ ಮಾತ್ರ ಕೋಣಗಳನ್ನು ನೋಡುತ್ತಿದ್ದ ಜನ ಇಲ್ಲೂ ನೋಡಿ ಎಲ್ಲರೂ ಮೆಚ್ಚುಕೊಂಡಿದ್ದಾರೆ. ಕೆಲವರು ಕಂಬಳದ ಕೋಣಗಳ ಜೊತೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ಒಟ್ಟಿನಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಕೋಣಗಳು ಸಾಹಿತ್ಯ ಸಮ್ಮೇಳದಲ್ಲೂ ತನ್ನ ಸೌಂದರ್ಯವನ್ನು ಪ್ರದರ್ಶಿಸಿ ಕನ್ನಡದ ಕಂಪಿನೊಂದಿಗೆ ಕಂಬಳದ ಕಂಪನ್ನು ಪಸರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.