ಬೆಂಗಳೂರು: ಕನ್ನಡ ಚಿತ್ರರಂಗದ ಧೃವತಾರೆ ಕಲಾಕೇಸರಿ ಉದಯ್ ಕುಮಾರ್ ಅವರ ಧರ್ಮಪತ್ನಿ ಕಮಲಮ್ಮ ಉದಯ್ ಕುಮಾರ್ ಇಂದು ದೈವಾಧೀನರಾಗಿದ್ದಾರೆ.
ಕನ್ನಡ ಸಿನಿರಂಗದಲ್ಲಿ ಕುಮಾರತ್ರಯರು ಎಂದೇ ಖ್ಯಾತಿ ಪಡೆದಿದ್ದ ರಾಜ್‍ಕುಮಾರ್, ಉದಯ್‍ಕುಮಾರ್, ಕಲ್ಯಾಣ್‍ಕುಮಾರ್ 60-70ರ ದಶಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಉದಯ್ ಕುಮಾರ್ ಅವರು ನಾಯಕ ನಟ ಸೇರಿದಂತೆ, ವಿಲನ್, ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರು ಪಡೆದಿದ್ದರು. ಉದಯ್ ಕುಮಾರ್ ಅವರಿಗೆ ಅವರ ಧರ್ಮಪತ್ನಿ ಕಮಲಮ್ಮ ಬೆನ್ನಿಗೆ ನಿಂತಿದ್ದರು.
Advertisement
Advertisement
ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದಿನಗಳವರೆಗೂ ಪ್ರತಿಷ್ಠಾನದ ಮೂಲಕ ಕಲಾ ಸೇವೆಯನ್ನು ಮುಂದುವರಿಸಿದ್ದರು. ಕಲಾಕೇಸರಿ ಹೆಸರನಲ್ಲಿ ಕನ್ನಡ ಸೇವೆಯನ್ನು, ಪ್ರತಿಷ್ಠಾನದ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
Advertisement
Advertisement
ಉದಯ್‍ಕುಮಾರ್ ಸ್ಮರಣಾರ್ಥ ಕಮಲಮ್ಮ ಹಾಗೂ ಪುತ್ರ ವಿಕ್ರಂ ಉದಯ್‍ಕುಮಾರ್, ಪುತ್ರಿ ಶ್ಯಾಮಲತ ಅವರು ಸೇರಿ ಪ್ರತಿಷ್ಠಾನವನ್ನು ಸ್ಥಾಪಿಸಿದ್ದರು. ಆನೇಕಲ್ ನಲ್ಲಿರುವ ಕಲಾಶಾಲೆಯನ್ನು ಇವರ ಕುಟುಂಬ ನಡೆಸುತ್ತಿದೆ. ಇಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಪ್ರದರ್ಶನ ಕಲೆಗಳು, ಭರತನಾಟ್ಯವನ್ನು ಕಲಿಯಲು ಅವಕಾಶವಿದೆ. ಕಮಲಮ್ಮನವರ ಅಂತಿಮ ವಿಧಿ-ವಿಧಾನದ ಎಲ್ಲಾ ಕಾರ್ಯಗಳು ಆನೇಕಲ್ ನಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.