ಕಾರವಾರ: ಪತಿ-ಪತ್ನಿ ಕಲಹದಿಂದ ಗಲಾಟೆ ಬಿಡಿಸಲು ಬಂದ ಚಿಕ್ಕಪ್ಪನಿಗೆ ಯುವಕರ ಗುಂಪು ಚಾಕು ಇರಿದು ಹತ್ಯೆ ಮಾಡಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದೆ.
ವಸಂತ್ ನಾಯ್ಕ (41) ಮೃತ ವ್ಯಕ್ತಿ. ಮಹೇಶ್ ಹಾಗೂ ಕುಮಾರ್ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಸುಚಿತ್ರಾ ಗಂಡನಿಂದ ಬೇರ್ಪಟ್ಟು ಶಿವಮೊಗ್ಗದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮನೆಯಲ್ಲಿಯೇ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದಳು.
ಇತ್ತ ಸುಚಿತ್ರಾ ಮಗಳು ತನ್ನ ತಾಯಿಗೆ ತಿಳಿಸದೇ ಸಿದ್ದಾಪುರಕ್ಕೆ ತಂದೆ ಮಹೇಶ್‌ಗೆ ಕರೆ ಮಾಡಿ ಚಿಕ್ಕಪ್ಪ ವಸಂತ್ ಮನೆಗೆ ಬಂದಿದ್ದಳು. ಸುಚಿತ್ರಾ ಮಗಳನ್ನು ಹುಡುಕಿಕೊಂಡು ಜ್ಯೋತಿಷಿ ವಾಹನದಲ್ಲಿ ತಂದೆ ಜೊತೆ ಕೆಲವು ಯುವಕರೊಂದಿಗೆ ಅವರಗುಪ್ಪದ ವಸಂತ್ ನಾಯ್ಕ ಅವರ ಮನೆಗೆ ಬಂದಿದ್ದಳು. ಆಕೆಯ ಪತಿ ಮಹೇಶ್ ಕೂಡ ಅಲ್ಲಿದ್ದರು. ಈ ವೇಳೆ ಸುಚಿತ್ರಾ ಮತ್ತು ಮಹೇಶ್ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅವರ ಕಾರನ್ನು ಜಖಂ ಮಾಡಲಾಗಿದ್ದು, ಗಲಾಟೆ ತಾರಕಕ್ಕೆ ಹೋಗಿ ಸುಚಿತ್ರ ಜೊತೆ ಬಂದಿದ್ದ ಯುವಕರು ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ್ದ ವಸಂತ್‌ಗೆ ಚಾಕು ಇರಿದಿದ್ದಾರೆ. ಅಲ್ಲದೇ, ಸುಚಿತ್ರ ಪತಿ ಮಹೇಶ್ ಹಾಗೂ ಪಕ್ಕದ ಮನೆಯ ಕುಮಾರ್ ಎಂಬವರಿಗೂ ಚಾಕು ಇರಿಯಲಾಗಿದೆ.
ವಸಂತ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದು, ಮಹೇಶ್ ಹಾಗೂ ಕುಮಾರ್ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಘಟನೆ ಸಂಬಂಧ ವಸಂತ್ ಅತ್ತಿಗೆ ಸಂಧ್ಯ ನಾಯ್ಕ ದೂರು ನೀಡಿದ್ದಾರೆ. ದೂರಿನಡಿ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಒಟ್ಟು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಎಸ್‌ಪಿ ದೀಪನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

