ಬ್ಯಾಂಕ್ ವಂಚನೆ – ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಸೋದರಳಿಯ ಬಂಧನ

Public TV
2 Min Read
ratul puri

ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಸೋದರಳಿಯ ರತುಲ್ ಪುರಿ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ರತುಲ್ ಪುರಿ ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ನಕಲಿ ದಾಖಲೆ ನೀಡಿ ಸುಮಾರು 354 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಇಂದು ಬೆಳಗ್ಗೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

Kamal Nath

ರತುಲ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮೋಸರ್ ಬೇರ್‍ನ ಮಾಜಿ ಹಿರಿಯ ಕಾರ್ಯನಿರ್ವಾಹಕರಾಗಿದ್ದಾರೆ. ರತುಲ್ 2009ರಿಂದ ವಿವಿಧ ಬ್ಯಾಂಕ್‍ಗಳಿಗೆ ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದಿದ್ದು, ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ದೂರು ನೀಡಿತ್ತು. ರತುಲ್ ಹಾಗೂ ಸಂಸ್ಥೆಯ ನಾಲ್ವರು ಮಾಜಿ ನಿರ್ದೇಶಕರು ಬ್ಯಾಂಕ್‍ಗೆ ನಕಲಿ ದಾಖಲೆ ನೀಡಿ ಸುಮಾರು 354 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಬ್ಯಾಂಕ್ ದೂರಿನಲ್ಲಿ ತಿಳಿಸಿದೆ.

ಮೋಸರ್ ಬೇರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೂರಿ ಹಾಗೂ ನಿರ್ದೇಶಕರಾದ ನೀತಾ ಪುರಿ, ಸಂಜಯ್ ಜೈನ್ ಮತ್ತು ವಿನೀತ್ ಶರ್ಮಾ ಅವರ ವಿರುದ್ಧ ಸಹ ಆರೋಪ ಹೊರಿಸಲಾಗಿದೆ.

ಮೋಸರ್ ಬೇರ್ ಡಿಜಿಟಲ್ ಡಾಟಾ ಸ್ಟೋರೇಜ್ ಮೀಡಿಯಾ ತಯಾರಿಕಾ ಕಂಪನಿಯಗಿದ್ದು, ಡಿವಿಡಿ ಸೇರಿದಂತೆ ಇತರೆ ಡಾಟಾ ಸ್ಟೋರೇಜ್ ಡಿವೈಸ್‍ಗಳನ್ನು ಉತ್ಪಾದಿಸುತ್ತಿತ್ತು. ಆದರೆ ನಷ್ಟ ಅನುಭವಿಸಿದ್ದರಿಂದ ಕಂಪನಿಯನ್ನು ಕಳೆದ ವರ್ಷ ಬಂದ್ ಮಾಡಲಾಗಿದೆ.

ಮೋಸರ್ ಬೇರ್ ನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಬಂಧಿಸುತ್ತಿರುವುದು ದುರದೃಷ್ಟಕರ, ಮೋಸರ್ ಬೇರ್ ಎಲ್ಲ ಕಾನೂನನ್ನು ಅನುಸರಿಸಿದೆ. ಅಲ್ಲದೆ, ಇದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್(ಎನ್‍ಸಿಎಲ್‍ಟಿ)ನಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಬಂಧಿಸುವುದು ಸರಿಯಲ್ಲ ಎಂದು ಸಂಸ್ಥೆ ತಿಳಿಸಿದೆ.

ರತುಲ್ ಅವರು ಈಗಾಗಲೇ ಹಲವು ತಿಂಗಳಿಂದ ವಿಚಾರಣೆಗೊಳಪಟ್ಟಿದ್ದು, ತೆರಿಗೆ ವಂಚನೆ ಸೇರಿದಂತೆ ಯುಪಿಎ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿಚಾರಣ ವೇಳೆ ತಿಳಿದು ಬಂದಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2007ರಲ್ಲಿ ವಿಐಪಿಗಳಿಗಾಗಿ ಒಂದು ಡಝನ್ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಮಾಡುವ ಕುರಿತು ಸುಮಾರು 3,600 ಕೋಟಿ ರೂ.ಗಳ ಡೀಲ್ ನಡೆದಿತ್ತು. ಈ ಪ್ರಕರಣದಲಿ ರತುಲ್ ಅವರ ಹೆಸರು ಕೇಳಿ ಬಂದಿತ್ತು.

ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ರತುಲ್ ಅವರಿಗೆ ಸಮನ್ಸ್ ಜಾರಿ ಮಾಡಿ, ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ಆದರೆ, ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಬಂಧಿಸಿದೆ.

ರತುಲ್ ಅವರು ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಸೋಮವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ರತುಲ್ ಅವರು ಚಾಪರ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನಾನು ಸಿದ್ಧನಿದ್ದೇನೆ. ಆದರೆ, ನನ್ನ ಮೇಲಿನ ಜಾಮೀನು ರಹಿತ ವಾರೆಂಟ್‍ನ್ನು ರದ್ದುಗೊಳಿಸಬೇಕು ಎಂದು ಕೇಳಿಕೊಂಡಿದ್ದರು.

ಆಗಸ್ಟ್ 6 ರಂದು ನ್ಯಾಯಾಲಯವು ರತುಲ್ ಅವರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ, ಜಾಮೀನು ರಹಿತ ವಾರೆಂಟ್‍ನ್ನು ಹೊರಡಿಸಿತ್ತು. ಈ ಕುರಿತು ರತುಲ್ ಅವರು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಅರೆಸ್ಟ್ ವಾರೆಂಟ್‍ನ್ನು ರದ್ದುಗೊಳಿಸುವಂತೆ ಕೋರಿದ್ದರು. ನ್ಯಾಯಾಲಯ ತೀರ್ಮಾನಿಸುವವರೆಗೆ ಬಂಧನದಿಂದ ಬಚಾವ್ ಆಗಿದ್ದರು. ನ್ಯಾಯಾಲಯದ ಅವಧಿ ಇಂದು ಕೊನೆಗೊಳ್ಳುತ್ತಿದ್ದಂತೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ನ್ಯಾಯಾಲಯ ನಾಳೆ ವಿಚಾರಣೆ ನಡೆಸಲಿದ್ದು, ಇಂದೇ ಅವರನ್ನು ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *