ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ (Vidhanasabha Election) ಹೀನಾಯ ಸೋಲಿನ ಬಳಿಕ ಮಧ್ಯಪ್ರದೇಶ ಕಾಂಗ್ರೆಸ್ (Madhya Pradesh Congress) ಸಮಿತಿ ಅಧ್ಯಕ್ಷ ಕಮಲ್ ನಾಥ್ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಸೋಲಿನ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ಕಳೆದ ತಿಂಗಳು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು, ಕಳೆದ ಭಾನುವಾರ ಮತ ಎಣಿಕೆ ನಡೆದಿತ್ತು. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 116 ಮ್ಯಾಜಿಕ್ ಸಂಖ್ಯೆಯಾಗಿದೆ. ಬಿಜೆಪಿಯು 163 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಪಡೆದರೆ, ಕಾಂಗ್ರೆಸ್ 66 ಸ್ಥಾನ ಗಳಿಸಿಕೊಳ್ಳುವುದಕ್ಕೆ ಏದುಸಿರು ಬಿಟ್ಟಿದೆ. ಈ ಎಲ್ಲ ಬೆಳವಣಿಗೆಗಳ ನಂತರ ಕಮಲ್ ನಾಥ್ ಇಂದು ಖರ್ಗೆ ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಕೈ ಹಿಡಿದ ಮಹಿಳೆಯರು
Advertisement
Advertisement
ಚುನಾವಣೆಗೂ ಮೊದಲು ಸೀಟು ಹಂಚಿಕೆ ಕುರಿತಂತೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nithish Kumar) ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಒಕ್ಕೂಟದ ಅನೇಕ ನಾಯಕರ ವಿರುದ್ಧ ಕಮಲ್ ನಾಥ್ (Kamal Nath) ನೀಡಿರುವ ಬಹಿರಂಗ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ವರಿಷ್ಠರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು? – ‘ಮಹಾರಾಜ’ನ ಪಟ್ಟದಾಸೆ
Advertisement
ಮಧ್ಯಪ್ರದೇಶದಲ್ಲಿ ಚುನಾವಣಾ ಪೂರ್ವ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದ ಸಮಾಜವಾದಿ ಪಕ್ಷವು ಕೇವಲ ನಾಲ್ಕರಿಂದ ಆರು ಸ್ಥಾನಗಳನ್ನು ಮಾತ್ರ ಕೇಳಿತ್ತು. ಜೆಡಿಯು ಕೇವಲ ಒಂದು ಸ್ಥಾನವನ್ನು ಮಾತ್ರ ಕೇಳಿದ್ದರೂ ಕಮಲ್ ನಾಥ್ ಒಪ್ಪಿರಲಿಲ್ಲ ಎನ್ನಲಾಗಿದೆ. ಅವರ ಈ ನಡೆ `ಇಂಡಿಯಾ ಕೂಟ’ದ ನಾಯಕರನ್ನು ಕೆಣಕಿತ್ತು. ಜೊತೆಗೆ ಚುನಾವಣೆ ಫಲಿತಾಂಶದ ನಂತರ ಕಮಲ್ ನಾಥ್ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗದೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಬಗ್ಗೆಯೂ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.