ಮಲಯಾಳಂ ಚಿತ್ರರಂಗದಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಬಹುಭಾಷಾ ನಟ ಕಮಲ್ ಹಾಸನ್ (Kamal Haasan) ಹೇಳಿಕೊಂಡಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ತಮ್ಮ ಸಿನಿಮಾದಲ್ಲಿನ ಆರಂಭಿಕ ದಿನಗಳು, ಕಲಿಯುವ ನಿರಂತರ ಬಯಕೆ ಮತ್ತು ಮಲಯಾಳಂ ಸಿನಿಮಾಗಳಿಂದ (Malayalam Cinema) ಕಲಿತ ಪ್ರಮುಖ ಪಾಠಗಳ ಬಗ್ಗೆ ವಿವರಿಸಿದ್ದಾರೆ.
ಸೃಜನಾತ್ಮಕವಾದ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದ ಸಮಯದಲ್ಲಿ ನಾನು ಮಲಯಾಳಂ ಚಿತ್ರಗಳತ್ತ ಮುಖ ಮಾಡಿದೆ. ಈ ನಿರ್ಧಾರ ಚಲನಚಿತ್ರ ನಿರ್ಮಾಣ ಮತ್ತು ನಟನೆಯ ಬಗ್ಗೆ ಇದ್ದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಈ ಹಂತವನ್ನು ನಾನು ವೃತ್ತಿಜೀವನದಲ್ಲಿ ನಿರ್ಣಾಯಕ ತರಬೇತಿ ಅವಧಿ ಎಂದು ಪರಿಗಣಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ಅವರ ಮಣಿರತ್ನಂ ನಿರ್ದೇಶನದ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ಬಹುಭಾಷಾ ಚಿತ್ರ ‘ಥಗ್ ಲೈಫ್’, ಜೂ. 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಿಲಂಬರಸನ್ (ಸಿಂಬು), ತ್ರಿಶಾ, ಅಶೋಕ್ ಸೆಲ್ವನ್ ಮತ್ತು ಅಭಿರಾಮಿ ಕೂಡ ನಟಿಸಿದ್ದು, ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಈ ಚಿತ್ರದ ಕತೆ, ಚಿತ್ರಕತೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಅವರ ಛಾಯಾಗ್ರಹಣ, ಅನ್ವರಿವ್ ಅವರ ಸಾಹಸ ನಿರ್ದೇಶನವಿದೆ. ಅಂದಹಾಗೆ ಥಗ್ ಲೈಫ್ ಸಿನಿಮಾ ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ಚಿತ್ರದ ಪ್ರಚಾರ ಕಾರ್ಯಗಳು ಪ್ರಸ್ತುತ ಭರದಿಂದ ಸಾಗುತ್ತಿದೆ. ಇದರ ನಡುವೆ ಅವರು ಸಂದರ್ಶನದಲ್ಲಿ ಮಲಯಾಳಂ ಚಿತ್ರಗಳ ಬಗ್ಗೆ ಮಾತಾಡಿದ್ದು, ಅಲ್ಲಿಂದ ಕಲಿತ ವಿಚಾರಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.