-ಮೋದಿ ಸಹ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು
ಚೆನೈ: 500 ಮತ್ತು 1000 ರೂ. ಮುಖಬೆಲೆ ನೋಟು ಬ್ಯಾನ್ ಮಾಡಿದ್ದ ವೇಳೆ ನಾನು ಮೋದಿಯವರನ್ನು ಬೆಂಬಲಿಸಿದ್ದಕ್ಕೆ ನಟ ಕಮಲ್ ಹಾಸನ್ ಕ್ಷಮೆ ಕೇಳಿದ್ದಾರೆ. ಒಂದು ವೇಳೆ ಮೋದಿ ಅವರು ಅಂದು ತಾವು ತೆಗೆದುಕೊಂಡಿದ್ದ ನಿರ್ಧಾರ ತಪ್ಪು ಎಂದು ಒಪ್ಪಿಕೊಂಡರೆ ನಾನು ಅವರನ್ನು ಬೆಂಬಲಿಸುತ್ತೇನೆಂದು ತಿಳಿಸಿದ್ದಾರೆ.
ಆನಂದವಿಕಟನ್ ಎಂಬ ತಮಿಳು ಮ್ಯಾಗ್‍ಜಿನ್ ನಲ್ಲಿ ಕಮಲ್ ಹಾಸನ್ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಮಹಾತ್ಮ ಗಾಂಧಿ ಅಂತಹ ದೊಡ್ಡ ವ್ಯಕ್ತಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದನ್ನು ತೋರಿಸಿದ್ದಾರೆ.
1000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯೀಕರಣ ಮಾಡಿದಾಗ ಮೊದಲು ನಾನು ಸ್ವಾಗತಿಸಿದ್ದೆ. ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ನೋಟ್ ಬ್ಯಾನ್ ಮಾಡಲಾಗಿದ್ದು, ಅದರಿಂದ ಸಾಮಾನ್ಯ ಜನರಿಗೆ ಸಣ್ಣಪುಟ್ಟ ತೊಂದರೆಗಳು ಆಗಿರುತ್ತವೆ ಎಂದು ಅರ್ಥೈಸಿಕೊಂಡಿದ್ದೆ. ಆದರೆ ನಾನು ನೋಟ್ ಬ್ಯಾನ್ ಬೆಂಬಲಿಸಿದ್ದಕ್ಕೆ ಹಲವು ನಟರು ಮತ್ತು ಅರ್ಥಶಾಸ್ತ್ರಜ್ಞರು ನನ್ನನ್ನು ಟೀಕಿಸಿದ್ದರು ಎಂದು ತಿಳಿಸಿದ್ದಾರೆ.
ಮೋದಿಯವರ ನೋಟು ರದ್ದತಿ ಒಳ್ಳೆಯ ನಿರ್ಧಾರವಾಗಿದೆ. ಆದರೆ ನೋಟ್ ಬ್ಯಾನ್ ಜಾರಿಗೊಳಿಸುವ ರೀತಿ ಸಮರ್ಪಕವಾಗಿರಲಿಲ್ಲ. ಇಂದು ನೋಟು ರದ್ದತಿ ತಪ್ಪು ಎಂದು ಹೇಳುವವರ ಮಾತು ಸರಿಯಾದಂತಾಗಿದೆ. ಸರ್ಕಾರದ ಪ್ರತಿಕ್ರಿಯೆ ಅನುಮಾನವನ್ನು ಹುಟ್ಟು ಹಾಕಿದೆ ಎಂದು ತಿಳಿಸಿದ್ದಾರೆ.