ತುಮಕೂರು: ಹೆಣ್ಣು ಮಕ್ಕಳನ್ನು ಚುಡಾಯಿಸುವ ಬೀದಿ ಕಾಮಣ್ಣರಿಗೆ, ಕಾಲೇಜು ಬಳಿ ನಿಂತು ವಿದ್ಯಾರ್ಥಿಯರನ್ನ ಕಾಡುವ ಕಾಮುಕರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ಹೊಸ ಪಡೆ ಸಜ್ಜಾಗಿದೆ. ಹುಡುಗಿಯರನ್ನು ಕೆಣಕಿದರೆ ಕೇಳೋರು ಯಾರು ಅಂತ ಕಾಲರ್ ಮೇಲೇರಿಸಿ ಓಡಾಡಿದರೆ ಜೈಲೂಟ ಗ್ಯಾರೆಂಟಿ. ಯಾಕೆಂದರೆ ಬೀದಿ ಕಾಮಣ್ಣರಿಗೆ, ಸ್ತ್ರೀ ಪೀಡಕರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ಕಲ್ಪತರು ಪಡೆ ಎಂಬ ಮಹಿಳಾ ಪೊಲೀಸ್ ಪಡೆ ಸನ್ನದ್ಧವಾಗಿದೆ. ರಾಜ್ಯದಲ್ಲೇ ಮೊದಲನೆ ಬಾರಿಗೆ ತುಮಕೂರು ಪೊಲೀಸರು ಕಲ್ಪತರು ಪಡೆ ಹೆಸರಿನ ಮಹಿಳಾ ಪೊಲೀಸರ ತಂಡ ರೆಡಿಮಾಡಿದ್ದಾರೆ.
Advertisement
ಮಹಿಳೆಯರು, ಬಾಲಕಿಯರು, ಯುವತಿಯರ ರಕ್ಷಣೆಗೆ ಶಾಲಾ-ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಹಿಳಾ ಹಾಸ್ಟೇಲ್ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಕಾಡುವ ಪೋಲಿಗಳಿಗೆ ಬುದ್ಧಿ ಕಲಿಸಲು ಈ ತಂಡ ಸಜ್ಜಾಗಿದೆ. ಅಬಲೆಯರಿಗೆ ರಕ್ಷಣೆ ನೀಡುವ ಜವಬ್ದಾರಿ ಹೊತ್ತಿರುವ ಈ ತಂಡಕ್ಕೆ ಕಳೆದ 6 ತಿಂಗಳಿಂದ ನಿರಂತರವಾಗಿ ತರಬೇತಿ ನೀಡಲಾಗಿದೆ. ಈ ತಂಡ ಪ್ರತಿದಿನ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಸ್ವಯಂ ರಕ್ಷಣೆ ಬಗ್ಗೆ ಹೆಣ್ಣು ಮಕ್ಕಳಿಗೆ ತರಬೇತಿ ನೀಡುತ್ತಿದೆ. ಜೊತೆಗೆ ಅಪತ್ಕಾಲದಲ್ಲಿ ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಎದುರಾಳಿಗಳ ದಾಳಿಗೆ ಪ್ರತಿದಾಳಿ ತೋರುವ ಕಲೆಯನ್ನು ಹೇಳಿ ಕೊಡಲಾಗುತ್ತಿದೆ. ಇದರ ಜೊತೆಗೆ ಬಾಲಕಿಯರಿಗೆ ತಮ್ಮನ್ನು ತಾವು ಕಾಪಾಡುವುದು ಹೇಗೆ? ಕಾಮುಕರ ವರ್ತನೆಗಳು ಹೇಗಿರುತ್ತೇವೆ? ಸಾರ್ವಜನಿಕ ಸ್ಥಳದಲ್ಲಿ ಹೇಗೆಲ್ಲಾ ಎಚ್ಚರವಾಗಿರಬೇಕು? ಎನ್ನುವುದನ್ನ ಮನದಟ್ಟು ಮಾಡಿಕೊಡಲಾಗುತ್ತಿದೆ.
Advertisement
Advertisement
ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುವ ಈ ಪಡೆಗೆ ನಾಲ್ಕು ವಿಭಾಗಗಳಿಂದ 80 ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತುಮಕೂರು ನಗರ, ಶಿರಾ, ತಿಪಟೂರು, ಕುಣಿಗಲ್ ವಿಭಾಗಕ್ಕೆ ಪ್ರತ್ಯೇಕವಾಗಿ 8 ಮಹಿಳಾ ಪೊಲೀಸ್ ಪೇದೆಗಳ ತಂಡವಿದ್ದು, ಪ್ರತಿ ತಂಡಕ್ಕೆ ಓರ್ವ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ತಂಡಕ್ಕೆ ಪ್ರತ್ಯೇಕವಾದ ವಾಹನ, ಸಮವಸ್ತ್ರ ಕೂಡ ನೀಡಲಾಗಿದೆ.
Advertisement
ಎಸ್‍ಪಿ ಡಾ. ಕೋನ ವಂಶಿ ಕೃಷ್ಣ ಈ ಯೋಜನೆಯ ರೂವಾರಿಯಾಗಿದ್ದು, ಈ ಕಲ್ಪತರು ಪಡೆ ಮಹಿಳಾ ರಕ್ಷಣೆಯ ಜವಬ್ದಾರಿಯನ್ನು ಮಾತ್ರ ಗಮನಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿದಿನ ಶಾಲಾ-ಕಾಲೇಜು ಸೇರಿದ್ದಂತೆ ಮಹಿಳೆಯರಿಗೆ ಅಸುರಕ್ಷತೆ ಅನ್ನಿಸುವ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೈಹಿಕ, ಮಾನಸಿಕ ಹಿಂಸೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಈ ರೀತಿ ವಿಭಿನ್ನವಾದ ತಂಡ ರಚನೆಯಾಗಿದೆ. ಕಾಮುಕರಿಂದ ತೊಂದರೆಗೊಳಗಾದ ಮಹಿಳೆಯರು ಕೂಡಲೇ ಈ ಕಲ್ಪತರು ಪಡೆಗೆ ಮಾಹಿತಿ ನೀಡಬಹುದಾಗಿದೆ. ಅದಕ್ಕಾಗಿ ಕಲ್ಪತರು ಪಡೆ ಸಿಬ್ಬಂದಿಗಳ ನಂಬರ್ ಗಳನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಮಹಿಳೆಯರ ಸುರಕ್ಷತೆಗೆ ತುಮಕೂರು ಪೊಲೀಸರು ತೆಗೆದುಕೊಂಡಿರುವ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.