ಚಿಕ್ಕಮಗಳೂರು: ತಿಂಗಳ ಹಿಂದೆ ಬರಬೇಡಿ ಎಂದು ಹೇಳುತ್ತಿದ್ದ ಈ ಸುಂದರ ತಾಣ ಈಗ ಪ್ರವಾಸಿಗರನ್ನು ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ. ವರ್ಷಪೂರ್ತಿ ಧಾರಾಕಾರವಾಗಿ ಹರಿಯುವ ಆ ನೀರು ಎಲ್ಲಿಂದ ಬರುತ್ತೆ ಎನ್ನುವುದೇ ನಿಗೂಢ. ಆನೆಯ ಆಕಾರದಲ್ಲಿ ಧುಮ್ಮಿಕ್ಕುವ ಆ ಜಲಧಾರೆಗೆ ಧಾರ್ಮಿಕ ನಂಬಿಕೆಯೂ ಉಂಟು. ತಿಂಗಳ ಹಿಂದೆ ಪ್ರವಾಹದಂತೆ ಹರಿಯುತ್ತಿದ್ದ ಆ ಸುಂದರ ತಾಣವೀಗ ನಯನ ಮನೋಹರ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಜಲಪಾತವೀಗ ಪ್ರಕೃತಿಯ ಮಾನಸ ಪುತ್ರಿಯಂತಾಗಿದೆ. ಗುಡ್ಡದ ತುದಿಯಿಂದ ಹರಿಯುವ ಈ ಹಾಲ್ನೋರೆಯ ಜಲಕ್ಕೆ ಕಲ್ಲತ್ತಿಗರಿ ಜಲಪಾತ ಎಂಬ ಹೆಸರಿದೆ. ಈ ಜಲಪಾತ ಇತಿಹಾಸದಲ್ಲಿ ಬತ್ತಿದ ಉದಾಹರಣೆ ಇಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಲ್ಲಿ ಸ್ನಾನ ಮಾಡಿದರೆ ಕೆಲವು ಕಾಯಿಲೆಗಳು ದೂರವಾಗುತ್ತೆ ಎಂಬುದು ಜನರ ನಂಬಿಕೆ. ಆನೆ ಆಕಾರದಲ್ಲಿರುವ ಈ ಜಲಪಾತಕ್ಕೆ ಧಾರ್ಮಿಕ ಇತಿಹಾಸವೂ ಇದೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಶಾಲಾ ಮಕ್ಕಳೇ ಹೆಚ್ಚು. ಈ ತಾಣ ಇಡೀ ರಾಜ್ಯಕ್ಕೆ ಗೊತ್ತು. ಈಗ ಮಕ್ಕಳಷ್ಟೇ ಅಲ್ಲದೆ ಕುಟುಂಬ ಸಮೇತರಾಗಿ ಬಂದು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ.
Advertisement
Advertisement
ಶತಮಾನಗಳಿಂದ ಹೀಗೆ ನಿರಂತರವಾಗಿ ಹರಿಯುತ್ತಿರುವ ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾಬಾಲಿಕೆಯರ ಉದ್ಭವ ಮೂರ್ತಿಗಳಿವೆ. ಪುರಾಣದ ಪ್ರಕಾರ ನರ ಮನುಷ್ಯರು ಇಲ್ಲಿಗೆ ಬಂದು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದರೆ ಅವರ ಪಾಪ-ಕರ್ಮಗಳೆಲ್ಲಾ ಪರಿಹಾರವಾಗುತ್ತೆ ಎನ್ನುವುದು ಸ್ಥಳೀಯರ ನಂಬಿಕೆ.
Advertisement
Advertisement
ಪವಿತ್ರ ಗಂಗೆಯಾಗಿರುವ ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಉದ್ಭವವಾಗಿದೆ. ಇಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದರೆ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನು ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ. ಆದ್ದರಿಂದ, ಪ್ರತಿದಿನ ಹತ್ತಾರು ಜನ ಈ ಕ್ಷೇತ್ರಕ್ಕೆ ದೇವರುಗಳನ್ನು ಕರೆ ತಂದು ಪೂಜಾ-ಕೈಂಕರ್ಯ ಕೈಗೊಳ್ಳುತ್ತಾರೆ. ಪೂಜೆಯ ಬಳಿಕ ಇಲ್ಲಿನ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಕಂಡು ಪುಳಕಿತರಾಗುತ್ತಾರೆ.
ಕಲ್ಲತ್ತಿಗಿರಿ ಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮ ಸ್ಥಾನ ಒಂದೆಡೆಯಾದರೆ, ದುಷ್ಟಶಕ್ತಿಗಳನ್ನು ದೂರ ಮಾಡುವ ದೈವಶಕ್ತಿಗೆ ಈ ಕ್ಷೇತ್ರ ಹೆಸರುವಾಸಿ. ಪ್ರವಾಸಕ್ಕೂ ಸೈ, ಧಾರ್ಮಿಕ ನಂಬಿಕೆಗೂ ಸೈ ಎನ್ನುವ ಈ ಕ್ಷೇತ್ರ ಕಾಫಿನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ ಎಂದರು ತಪ್ಪಿಲ್ಲ. ಆದರೆ ಇಲ್ಲಿನ ಮೂಲಭೂತ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸುತ್ತಿದ್ದಾರೆ.