ಮಡಿಕೇರಿ: ಮಂಗಳೂರಲ್ಲಿ ಏ.18ರಂದು ಮತದಾನ ನಡೆದಿದೆ. ಈ ಸಲ ಮಂಗಳೂರಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಲೆ ಇದ್ದಿದ್ರಿಂದ ಮೋದಿಯವರೇ ಬಿಜೆಪಿ ಪ್ರಚಾರದ ಟಾಪಿಕ್ ಆಗಿದ್ದರು. ಅವರನ್ನೇ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡಿ ಮತ ಕೇಳಿತ್ತು.
ಆದ್ರೆ ಈ ಬಗ್ಗೆ ಶನಿವಾರ ಮಡಿಕೇರಿಯಲ್ಲಿ ಮತನಾಡಿರುವ ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ಅಭ್ಯರ್ಥಿಗಳು ಬರೀ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣಾ ಯಾಚನೆ ನಡೆಸುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಷ್ಟೇನೂ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಅವರ ಸಾಧನೆ ಹೆಸರಿನಲ್ಲಿ ಮತ ಕೇಳುವುದಕ್ಕಿಂತ ಆಯಾ ಕ್ಷೇತ್ರದ ಅಭ್ಯರ್ಥಿ ತಾನು ಮಾಡಿದ ಹಾಗೂ ಮಾಡಲಿರುವ ಸಾಧನೆಯನ್ನು ಹೇಳಿಕೊಂಡು ಮತ ಕೇಳುವುದು ಸೂಕ್ತ. ಮೋದಿ ಅವರ ಸಹಕಾರದಿಂದ ತಾನು ಕ್ಷೇತ್ರದ ಜನತೆಗಾಗಿ ಮಾಡಿರುವ ಸಾಧನೆ ಏನು ಎನ್ನುವುದನ್ನು ಅಭ್ಯರ್ಥಿಗಳು ಬಿಂಬಿಸಿಕೊಳ್ಳುವ ಮೂಲಕ ಮತ ಯಾಚಿಸಬೇಕು ಎಂದರು.
ಓರ್ವ ವ್ಯಕ್ತಿಯ ಸಾಧನೆಗಳನ್ನು ಬಿಂಬಿಸಿಕೊಂಡು ಮತ ಕೇಳುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ವ್ಯಕ್ತಿ ಪೂಜೆ ನಮ್ಮ ಸಂಸ್ಕೃತಿಯಲ್ಲ ಎಂದೂ ಹೇಳಿದರು.
ಬಿಜೆಪಿಯಲ್ಲಿ ಮೋದಿ ಅವರನ್ನೇ ಮುಂದಿನ ಪ್ರಧಾನಿಯಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಮಹಾಘಟಬಂಧನ್ ನಲ್ಲಿ ರಾಹುಲ್ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ದೇವೇಗೌಡ ಸೇರಿದಂತೆ ಯಾರು ಪ್ರಧಾನಿ ಎಂದೇ ಬಿಂಬಿಸುತ್ತಿಲ್ಲ. ಇದು ಮಹಾಘಟಬಂಧನ್ ನಾಯಕರ ಹತಾಶೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಟೀಕಿಸಿದರು.
ಒಟ್ಟಿನಲ್ಲಿ ಪ್ರಭಾಕರ್ ಭಟ್ ಹೇಳಿಕೆಯಿಂದ ಲೋಕ ಸಮರದ ಹೊತ್ತಲ್ಲಿಯೇ ಆರ್‍ಎಸ್‍ಎಸ್ ಮೋದಿ ವಿರುದ್ಧ ತಿರುಗಿಬಿತ್ತಾ ಅನ್ನೋ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.