ಮಂಗಳೂರು: ಮಂಗಳೂರು ವಿವಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಎಸ್‌ಎಫ್‌ಐ ವಿರೋಧ ವ್ಯಕ್ತಪಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ 2021-22ರ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಆಹ್ವಾನಿಸಲಾಗಿದೆ. ಬುಧವಾರ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕೋಮು ದ್ವೇಷಕ್ಕೆ ಕುಖ್ಯಾತರಾಗಿರುವ ಪ್ರಭಾಕರ್ ಭಟ್‌ರಂತವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಸಿಎಫ್‌ಐ ಹೇಳಿದೆ.
Advertisement
ಕೋಮು ಮತಾಂಧತೆಗೆ ವಿದ್ಯಾರ್ಥಿಗಳು ಬಲಿಯಾಗದಂತೆ ಎಚ್ಚರವಹಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಇದೆ. ಧರ್ಮಾಧಾರಿತ ತಾರತಮ್ಯ, ಜನಾಂಗ ದ್ವೇಷಕ್ಕೆ ಕುಖ್ಯಾತರಾಗಿರುವ ಪ್ರಭಾಕರ್ ಭಟ್‌ರಂತವರನ್ನು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಬ್ರಿಟನ್ ಸಂಸತ್ ಆಹ್ವಾನ
Advertisement
Advertisement
ಎಸ್‌ಎಫ್‌ಐ ಹೇಳಿಕೆಯಲ್ಲಿ ಏನಿದೆ?
ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೋಮುವಾದಿ ಸಂಘಟನೆಗಳು ತಮ್ಮ ಮತೀಯ ದ್ರುವೀಕರಣದ ಅಜೆಂಡಾಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಸರ್ಕಾರಿ ಶಾಲಾ ವಠಾರಗಳನ್ನು ದುರ್ಬಳಕೆ ಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈಗಾಗಲೇ ಉಡುಪಿಯ ಕಾಲೇಜಿನಲ್ಲಿ ಹಿಜಬ್‌ನಿಂದ ಪ್ರಾರಂಭಗೊಂಡ ವಿಷಯಗಳು ಮತೀಯ ರೂಪ ಪಡೆದು ಕೇಸರಿ ಶಾಲು ಸೇರಿದಂತೆ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಬಿಕೆಗಳಿಗೆ, ಗುಂಪು ಘರ್ಷಣೆಗಳಿಗೆ ಎಡೆಮಾಡಿ ಕೊಟ್ಟಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ.
Advertisement
ಇಂತಹ ವಿವಿಧ ಕಾರಣಕ್ಕೆ ಬಹಳಷ್ಟು ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣವನ್ನು ಪಡೆಯಲು ಬರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತವರ ಪೋಷಕರು ಇಂತಹ ಘಟನೆಗಳಿಂದ ಭೀತಿಗೊಳಗಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಬೇಕಾಗಿದ್ದ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮರೆಮಾಚಲು ಇಂತಹ ಘಟನೆಗಳಿಗೆ ಕುಮ್ಮಕ್ಕನ್ನು ನೀಡುತ್ತಿದೆ.
ಈ ಕಾರಣಕ್ಕಾಗಿಯೇ ಸಂಘಪರಿವಾರ ಅಲ್ಪ ಸಂಖ್ಯಾತರನ್ನು ಗುರಿಯನ್ನಾಗಿಸಿ ಕೋಮು ಧ್ರುವೀಕರಣ ರಾಜಕಾರಣ ನಡೆಸಲು ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿ ಇದೀಗ ಕಾಲೇಜು ಕ್ಯಾಂಪಸ್‌ಗಳನ್ನು ಮುಂದಿನ ಗುರಿಯನ್ನಾಗಿಸಿವೆ. ಇಂತಹ ಉದ್ದೇಶದಿಂದಲೇ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವೊಂದಕ್ಕೆ ಉದ್ಘಾಟಕರಾಗಿ ಆಹ್ವಾನಿಸಲಾಗಿದೆ. ಇದು ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಭಿಕೆಗಳನ್ನು, ಕಂದಕಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಎಂಟು ಬಾರಿ ಬಿಜೆಪಿ ಶಾಸಕ ಸತೀಶ್ ಮಹಾನಾ ಈಗ ಯುಪಿ ಸ್ಪೀಕರ್
ಈ ರೀತಿ ಕಾಲೇಜು ಕ್ಯಾಂಪಸ್‌ಗಳಿಗೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುವ, ಕೋಮು ಪ್ರಚೋದಿತ ದ್ವೇಷಗಳನ್ನು ಹರಡುವ ಮತ್ತು ಅವೈಜ್ಞಾನಿಕ ಮನೋಭಾನೆಗಳನ್ನು ಬಿತ್ತುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ವಿಶ್ವವಿದ್ಯಾನಿಲಯದ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವಿರೋಧಿಸುತ್ತದೆ. ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವಕಾಶ ಮಾಡಿಕೊಟ್ಟ ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಅವರ ನಡೆಯನ್ನು ಖಂಡಿಸುತ್ತದೆ. ಹಾಗೂ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ, ಕಾಲೇಜು ಕ್ಯಾಂಪಸ್‌ಗಳಲ್ಲಿ ಶಾಂತಿ ಕದಡದಂತೆ ಮುಂಜಾಗ್ರತೆಯ ಭಾಗವಾಗಿ ಈ ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಮುಖಂಡ ವಿನಿತ್ ದೇವಾಡಿಗ, ವಿನುಶ ರಮಣ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.