ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್ ಆದ ಅಮಿತಾಭ್ ಬಚ್ಚನ್ ಅವರ ಹೊಸ ಲುಕ್.
ಹೌದು, ಕಳೆದ ವರ್ಷಅಮಿತಾಭ್ (Amitabh Bachchan) ಅವರ ಬರ್ತ್‌ಡೇ ದಿನದಂದು ಕಲ್ಕಿ ಚಿತ್ರದಲ್ಲಿನ ಅವರ ಲುಕ್ ಹೇಗಿರಲಿದೆ ಎಂಬ ಸಣ್ಣ ಝಲಕ್ ರಿಲೀಸ್ ಆಗಿತ್ತು. ಅದಾದ ಬಳಿಕ ಚಿತ್ರದಲ್ಲಿ ಅಮಿತಾಭ್ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಆ ಕೌತುಕವನ್ನು ತಣಿದಿದೆ. ಅಂದರೆ, ಕಲ್ಕಿ ಚಿತ್ರದಲ್ಲಿನ ಅಮಿತಾಭ್ ಬಚ್ಚನ್ ಪಾತ್ರದ ಝಲಕ್ ಹೊರಬಿದ್ದಿದೆ.
- Advertisement
- Advertisement
ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕಲ್ಕಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಅಶ್ವತ್ಥಾಮನಾಗಿ ಅಮಿತಾಭ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಒಂದು ನಿಮಿಷದ ಝಲಕ್‌ನಲ್ಲಿ ಎಲ್ಲ ಭಾಷೆಯನ್ನೂ ಬೆರೆಸಿ ಟೀಸರ್ ಬಿಡುಗಡೆ ಮಾಡಲಾಗಿದೆ. ಪುಟಾಣಿಯೊಬ್ಬ ನೀವ್ಯಾರು, ನಿಮ್ಮ ಜತೆ ನಾನು ಯಾವ ಭಾಷೆಯಲ್ಲಿ ಮಾತನಾಡಲಿ? ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. ಆಗ, ಈಗ ನನ್ನ ಸಮಯ ಬಂದಿದೆ. ನನ್ನ ಕೊನೆಯ ಯುದ್ಧಕ್ಕೆ ಸಮಯ ಬಂದಿದೆ. ನಾನು ದ್ರೋಣಾಚಾರ್ಯರ ಮಗ ಅಶ್ವತ್ಥಾಮ (Ashwatthama) ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ ಅಮಿತಾಭ್ ಬಚ್ಚನ್. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್. ಪ್ರಬಾಸ್ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಸೇರಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದೆ.