ಮಸಿ ಬಳಿದು ನನ್ನನ್ನು ದೂರವಿಡಲು ಸಾಧ್ಯವಿಲ್ಲ, ನಾನೂ ಯಾವತ್ತು ಹಿಂದೂಪರ ಹೋರಾಟಗಾರ: ಕಾಳಿ ಸ್ವಾಮಿ

ಬೆಂಗಳೂರು: ಮಸಿ ಬಳಿದು ನನ್ನನ್ನು ದೂರವಿಡಲು ಆಗಲ್ಲ. ನಾನು ಯಾವಾಗಲೂ ಹಿಂದೂ ಪರ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದು ಕಾಳಿ ಸ್ವಾಮಿ ಗುಡುಗಿದ್ದಾರೆ.
ಮಲ್ಲೇಶ್ವರಂ ಗಂಗಮ್ಮ ದೇವಾಲಯದ ಹೊರಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕಲ್ಲು, ಮುಳ್ಳು ಇದೆ ಎಂದಿದ್ದೆ. ಕುವೆಂಪು ಅವರನ್ನು ಅನುಸರಿಸುವವರನ್ನು ಗುಂಡಿಟ್ಟು ಕೊಲ್ಲಿ ಎಂದಿಲ್ಲ. ಶಿವರಾಮೇಗೌಡ್ರು ಯಾಕೆ ನನ್ನ ಮೇಲೆ ಹಗೆ ಸಾಧಿಸ್ತಿದ್ದಾರೆ? ಕುವೆಂಪುರ ವಿರುದ್ಧ ನಾನು ಮಾತಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ
ನನ್ನ ಮೇಲೆ ಆರೋಪ ಮಾಡಿದವರಿಗೆ ನಾನು ಚಾಲೇಂಜ್ ಮಾಡ್ತೀನಿ. ಕುವೆಂಪು ಅವರ ರಾಮಾಯಣ ದರ್ಶನಂ ಬಗ್ಗೆ ಬನ್ನಿ ಚರ್ಚೆ ಮಾಡೋಣ. ನಾನು ಮಸಿ ಬಳಿದ ಪ್ರಕರಣದಿಂದ ಹಿಂದೆ ಸರಿಯಲ್ಲ. ನನಗೆ ಪ್ರತಿದಿನ ಕೊಲೆ ಬೆದರಿಕೆ ಕರೆಗಳು ಬರ್ತಿವೆ. ಆದ್ದರಿಂದ ನಾನು ಇಂದು ಬಂದು ಕಂಪ್ಲೇಂಟ್ ನೀಡಿದ್ದೇನೆ ಎಂದಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದ ಕಾಳಿ ಸ್ವಾಮಿಗೆ ಪ್ರಶಾಂತ್ ಸಂಬರಗಿ, ಪುನೀತ್ ಕೆರೆಹಳ್ಳಿ ಸಾಥ್ ನೀಡಿದರು. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ
ಏನಿದು ಘಟನೆ?
ಮಲ್ಲೇಶ್ವರಂ ಗಂಗಮ್ಮ ದೇವಾಲಯದಲ್ಲಿ ಪೂಜೆ ಮುಗಿಸಿ ಹೊರಬರುತ್ತಿದ್ದ ಕಾಳಿ ಸ್ವಾಮಿಗೆ ಗುಂಪೊಂದು ಏಕಾಏಕಿ ಮಸಿ ಬಳಿದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂಜೆ ಮುಗಿಸಿ ಕಾಳಿ ಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಅವರಿಗೆ ಎದುರಾದ ಗುಂಪೊಂದು ನೀವು ಕುವೆಂಪು ಅವರನ್ನು ಮತ್ತು ಕನ್ನಡಪಡೆಗಳನ್ನು ನಿಂದಿಸಿದ್ದೀರಾ ಎಂದು ಜಗಳವಾಡಿ ಏಕಾಏಕಿ ಮಸಿ ಬಳಿದಿತ್ತು.