ಕಲಬುರಗಿ: ಭಕ್ತರಿಗೆ ತೋಮಲ ಸೇವೆ ನೀಡುವುದಾಗಿ ಹೇಳಿ ವಂಚಿಸಿದ್ದ ಆರೋಪದಡಿ ತಿರುಪತಿ ತಿರುಮಲ ಟ್ರಸ್ಟ್‍ಗೆ ದಂಡ ವಿಧಿಸಲಾಗಿದೆ. ಕಲಬುರಗಿ ಜಿಲ್ಲಾ ಗ್ರಾಹಕರ ವೇದಿಕೆ ಮೂರು ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಕಲಬುರಗಿ ನಗರದ ವಕೀಲರಾದ ಮದನರಾವ್ ಕಮಲಾಪುರಕರ್ ಅವರು ತಿರುಮಲ ತಿರುಪತಿ ದೇವಾಲಯದಲ್ಲಿ ಕುಟುಂಬದ 12 ಸದಸ್ಯರ ಸಮೇತ ತೋಮಲ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ತಲಾ ಒಬ್ಬರಿಗೆ 220 ರೂ. ವಿನಂತೆ ಒಟ್ಟು 2,640 ರೂ. ಡಿಡಿಯನ್ನು 2007ರ ಅಕ್ಟೋಬರ್ 4ರಂದು ದೇವಾಲಯಕ್ಕೆ ನೀಡಿದ್ದರು. ಈ ಡಿಡಿಗೆ ಪ್ರತಿಕ್ರಿಯಿಸಿದ ದೇವಾಲಯ ಆಡಳಿತ ಮಂಡಳಿ, ತಲಾ 3 ಜನರಂತೆ 660 ಮೌಲ್ಯದ ಪ್ರತ್ಯೇಕ ಡಿಡಿ ಪಾವತಿಸುವಂತೆ ತಿಳಿಸಿತ್ತು. ಮದನ್ ರಾವ್ ಅವರು ಈ ಮೊತ್ತವನ್ನು ಡಿಡಿ ಮೂಲಕ ಪಾವತಿಸಿದ್ದರು.
Advertisement
2007ರ ಅಕ್ಟೋಬರ್ 9ರಂದು ಎರಡು ಸೇವಾ ಟಿಕೆಟ್‍ಗಳನ್ನು ವಿತರಿಸಿದ ದೇವಾಲಯ ಆಡಳಿತ ಮಂಡಳಿ 2015ರ ಫೆಬ್ರವರಿ 11ರಂದು ತೋಮಲ ಸೇವೆ ಮಾಡಬಹುದು ಎಂದು ತಿಳಿಸಿತ್ತು. ಅಷ್ಟೇ ಅಲ್ಲದೇ ಒಂದು ಟಿಕೆಟ್‍ನಲ್ಲಿ ತಲಾ 6 ಮಂದಿ ಪೂಜೆ ಸಲ್ಲಿಸಬಹುದು ಎಂದು ಹೇಳಿತ್ತು. 2015ರ ಫೆಬ್ರುವರಿ 2ರಂದು ಮತ್ತೊಂದು ಪತ್ರವನ್ನು ಕಳುಹಿಸಿದ ಟ್ರಸ್ಟ್ ಒಂದು ಟಿಕೆಟ್ ರದ್ದುಗೊಳಿಸಿ ಒಂದು ಟಿಕೆಟ್ ಮೂಲಕ 6 ಮಂದಿ ತೋಮಲ ಸೇವೆ ಮಾಡಬಹುದು ಎಂದು ತಿಳಿಸಿತ್ತು.
Advertisement
ಒಂದು ಸೇವಾ ಟಿಕೆಟ್ ರದ್ದು ಪಡಿಸಿದ್ದನ್ನು ಪ್ರಶ್ನಿಸಿ ಮದನರಾವ್ ಅವರು ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ವೇದಿಕೆ 3 ಲಕ್ಷ ರೂ. ದಂಡ ಮತ್ತು ದೂರುದಾರರಿಗೆ ವಕಾಲತ್ತಿನ ಖರ್ಚು 5 ಸಾವಿರ ರೂಪಾಯಿಯನ್ನು 4 ವಾರದ ಒಳಗಡೆ ಪಾವತಿಸುವಂತೆ ಸೂಚಿಸಿದೆ.