ಚಿಕ್ಕಮಗಳೂರು: ಕಳಸದ ಬಳಿ ಜೀಪ್ ಸಮೇತ ಭದ್ರಾ ನದಿಗೆ (Bhadra River) ಬಿದ್ದು ನಾಪತ್ತೆಯಾಗಿದ್ದ ಚಾಲಕ ಶಮಂತ್‌ನ ಮೃತದೇಹ 5 ದಿನಗಳ ಬಳಿಕ ಪತ್ತೆಯಾಗಿದೆ. ಸುಮಾರು 2 ಕಿಮೀ ದೂರದಲ್ಲಿ ಗಿಡಗಳ ನಡುವೆ ಮೃತದೇಹ ಸಿಕ್ಕಿದೆ.
ಕಳೆದ ಗುರುವಾರ ಬಾಡಿಗೆ ಮುಗಿಸಿಕೊಂಡು ಕೂಲಿ ಕಾರ್ಮಿಕರನ್ನ ಕರೆದೊಯ್ಯಲು ಹೋಗುವಾಗ ರಸ್ತೆಯ ಇಳಿಜಾರಿನಲ್ಲಿ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಭದ್ರಾ ನದಿಗೆ ಉರುಳಿತ್ತು. ಮರುದಿನವೇ ಪಿಕಪ್ ಪತ್ತೆಯಾಗಿತ್ತು. ಚಾಲಕ ಶಮಂತ್ ಮೃತದೇಹ ಪತ್ತೆಯಾಗಿರಲಿಲ್ಲ. ಕಳೆದ ಐದು ದಿನಗಳಿಂದ ಎನ್‌ಡಿಆರ್‌ಎಫ್ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ನುರಿತ ಈಜು ತಜ್ಞರು ಹಾಗೂ ಸ್ಥಳಿಯರು ಹುಡುಕಾಟ ನಡೆಸಿದ್ದರು. ಇಂದು (ಜು.28) ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮಗನ ಸಾವಿನಿಂದ ಮನನೊಂದ ತಾಯಿ – ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆ
ಪಿಕಪ್ ಭದ್ರಾ ನದಿಗೆ ಬಿದ್ದು ಮಗ ಸಾವನ್ನಪ್ಪಿದ ವಿಷಯ ತಿಳಿದು ತಾಯಿ ರವಿಕಲಾ ಕೂಡ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಒಂದೇ ದಿನ ಒಂದೇ ಮನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Kalasa | ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದ ಪಿಕಪ್ – ಯುವಕ ಸಾವು