ನವದೆಹಲಿ: ಮಹದಾಯಿ ಯೋಜನೆಗೆ ನೀಡಿರುವ ತಾತ್ಕಾಲಿಕ ತಡೆಯನ್ನು ಹಿಂಪಡೆಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಕೇಂದ್ರ ಸಚಿವರ ನಿಯೋಗ ಮನವಿ ಮಾಡಿದೆ.
ಗುರುವಾರ ದೆಹಲಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಉಮೇಶ್ ಕತ್ತಿ ಒಳಗೊಂಡ ನಿಯೋಗ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿ ಮುಂದುವರಿಸುವಂತೆ ಮನವಿ ಮಾಡಿತು.
ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿದ್ದು ಇದಕ್ಕೆ ಅಡ್ಡಿ ಮಾಡಬಾರದು ಇಲ್ಲಿ ಯಾವುದೇ ಜಲ ವಿದ್ಯುತ್ ಅಥವಾ ನೀರಾವರಿ ಯೋಜನೆಗಳನ್ನು ಮಾಡುತ್ತಿಲ್ಲ. ಹೀಗಾಗಿ ನೀಡಿರುವ ತಡೆಯನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಕುಡಿಯುವ ನೀರಿನ ಯೋಜನೆಯಾದ ಹಿನ್ನೆಲೆ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿದೆ. ಇದನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಅರ್ಜಿ ಸಲ್ಲಿಸಿವೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಮುಂದೆ ಪರಿಶೀಲನೆ ಮಾಡಿಕೊಳ್ಳೋಣ ಈಗ ಸುಪ್ರೀಂ ಕೋರ್ಟ್ ನೆಪವೊಡ್ಡಿ ಯೋಜನೆಗೆ ನೀಡಿರುವ ಅನುಮತಿಗೆ ತಡೆ ನೀಡಬಾರದು, ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಉಮೇಶ್ ಕತ್ತಿ, ಪ್ರಕಾಶ್ ಜಾವ್ಡೇಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ತೊಂದರೆ ನೀಡುವುದಿಲ್ಲ ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಒಪ್ಪಿಗೆ ನೀಡಿತ್ತು. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವ ಹಿನ್ನೆಲೆ ಒಪ್ಪಿಗೆಗೆ ತಡೆ ನೀಡುವಂತೆ ಗೋವಾ ಸರ್ಕಾರ ಕೇಂದ್ರ ಸಚಿವ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿತ್ತು. ಒತ್ತಡದ ಬೆನ್ನೆಲ್ಲೇ ಬುಧವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಯೋಜನೆಗೆ ನೀಡಿದ್ದ ಒಪ್ಪಿಗೆಗೆ ತಡೆ ನೀಡಿತ್ತು.