ಕೆಪಿ ನಾಗರಾಜ್
ನಂಜನಗೂಡಿನ ಪ್ರಭಾವಿ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವುದು ಅಧಿಕೃತವಾಗಿದೆ. ಯಾವಾಗ ಎಂಬ ದಿನಾಂಕ ಮಾತ್ರ ನಿರ್ಧಾರವಾಗಬೇಕಿದೆ. ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೆ ಪಬ್ಲಿಕ್ ಟಿವಿ ವೆಬ್‍ಸೈಟ್. ಒಂದು ತಿಂಗಳ ಹಿಂದೆಯೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ಈ ಸುದ್ದಿ ಬರೆಯಲಾಗಿತ್ತು. ಇವತ್ತು, ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
ನಂಜನಗೂಡಿನಲ್ಲಿ ಸಭೆ ನಡೆಸಿದ ಕಳಲೆ ಕೇಶವಮೂರ್ತಿ ತಾವು ತಮ್ಮ ಹಿತೈಷಿಗಳ ಅಭಿಪ್ರಾಯದಂತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಂಜನಗೂಡು ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ವಿರುದ್ಧ ತಾವೇ ಕಾಂಗ್ರೆಸ್‍ನ ಅಭ್ಯರ್ಥಿ ಎಂಬುದನ್ನು ಹೇಳಿದ್ದಾರೆ. ಹೀಗಾಗಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯೋ ಪ್ಲಾನ್ ನಡೆಸಿದ್ದ ಮೂಲ ಕಾಂಗ್ರೆಸಿಗರ ಕನಸಿಗೆ ತಣ್ಣೀರು ಎರಚಿದಂತಾಗಿದೆ.
Advertisement
ಈ ಉಪ ಚುನಾವಣೆಯಲ್ಲೆ ತಮ್ಮ ಮಗನಿಗೆ ಚುನಾವಣಾ `ಟ್ರಯಲ್’ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ, ಮಹದೇವಪ್ಪ ಅಂದುಕೊಂಡಿದ್ದರು. ಇದಕ್ಕಾಗಿ, ನಂಜನಗೂಡು ಕ್ಷೇತ್ರದ ಹಳ್ಳಿ ಹಳ್ಳಿಯನ್ನು ಸುತ್ತಿದ್ದರು. ಯಾರೇ ಅಭ್ಯರ್ಥಿ ಆದರೂ ತಾವೇ ಓಡಾಟ ಮಾಡಬೇಕು. ಹಣ ವೆಚ್ಚ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ತಮ್ಮ ಮಗನಿಗೆ ಯಾಕೆ ಟಿಕೆಟ್ ಕೊಡಿಸಿ ಒಂದು ಟ್ರಯಲ್ ನೋಡಬಾರದು. ಗೆದ್ದರೆ ಮಗ ಶಾಸಕ, ಸೋತರೆ ಮಗನಿಗೆ ಒಂದು ಕ್ಷೇತ್ರ ಸಿಕ್ಕಂತಾಗುತ್ತೆ. ಜೊತೆಗೆ ಚುನಾವಣೆ ಎದುರಿಸೋ ಅನುಭವವಾಗುತ್ತೆ ಅನ್ನೋದು ಮಹದೇವಪ್ಪ ಅವರ ಪ್ಲಾನ್ ಆಗಿತ್ತು.
Advertisement
ಆದರೆ, ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಚಿವರ ಮಗ ಸುನೀಲ್‍ಬೋಸ್‍ಗೆ ಟಿಕೆಟ್ ಕೊಡೋ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಶ್ರೀನಿವಾಸಪ್ರಸಾದ್ ಅಂತಹ ಹಿರಿಯ ರಾಜಕಾರಣಿ ಮುಂದೆ ಸುನೀಲ್‍ಬೋಸ್ ಸ್ಪರ್ಧಿಸಿದರೆ ಸೋಲಿನ ಜೊತೆಗೆ ದೊಡ್ಡ ಅವಮಾನ ಎದುರಿಸಬೇಕಾಗುತ್ತೆ. ಹೀಗಾಗಿ, ಸುನೀಲ್‍ಬೋಸ್‍ಗೆ ಟಿಕೆಟ್ ಬೇಡ ಅನ್ನೋ ಕೂಗು ಎದ್ದಿತ್ತು. ಈ ಕೂಗಿಗೆ ಚಾಮರಾಜನಗರ ಸಂಸದ ಧೃವನಾರಾಯಣ್ ಕೂಡ ಧ್ವನಿ ಸೇರಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ, ಮಹದೇವಪ್ಪಗೆ ಮಗನನ್ನು ಕಣಕ್ಕೆ ಇಳಿಸೋ ಯೋಚನೆ ಕೈ ಬಿಡುವಂತೆ ಹೇಳಿದ್ದರು. ಇದರಿಂದ, ಮಹದೇವಪ್ಪ ಬೇಸರಕ್ಕೆ ಒಳಗಾಗಿದ್ದು ಈಗ ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.
Advertisement
ಪ್ರತಿಷ್ಠೆಯ ಮಹಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿಗಾಗಿ ಕವಡೆ ಬೀಡುತ್ತಿದ್ದ ಸಿಎಂ ಟೀಂ ಈಗ ಯಶಸ್ವಿಯಾಗಿ ಆಪರೇಷನ್ ಕಾಂಗ್ರೆಸ್ ನಡೆಸಿದೆ. ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲು ನಿರ್ಧರಿಸಿದೆ. ಇದನ್ನು ಒಪ್ಪಿದ ಕಳಲೆ ಕೇಶವಮೂರ್ತಿ ಇವತ್ತು ಜೆಡಿಎಸ್‍ಗೆ ಗುಡ್ ಬೈ ಹೇಳಿದರು.
Advertisement
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ, ಶ್ರೀನಿವಾಸಪ್ರಸಾದ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಭಾಗದ ದಲಿತ, ಲಿಂಗಾಯತ ಹಾಗೂ ಒಕ್ಕಲಿಗ ಮತದಾರರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರೋ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಚುನಾವಣೆಯಲ್ಲಿ ಲಾಭವಾಗುತ್ತೆ ಅನ್ನೊ ಲೆಕ್ಕಚಾರ ದಿಂದ ಕಾಂಗ್ರೆಸ್ ಕಳಲೆ ಕೇಶವಮೂರ್ತಿಗೆ ಮಣೆ ಹಾಕಿದೆ.
ಅಲ್ಲದೆ, ಕಳಲೆ ಕೇಶವಮೂರ್ತಿ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ಇಳಿಯೋ ಕಾರಣ ಜೆಡಿಎಸ್‍ಗೆ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ. ತಮ್ಮ ಬತ್ತಳಿಕೆಯಲ್ಲಿನ ಪ್ರಬಲ ಆಸ್ತ್ರವೇ ಕಾಂಗ್ರೆಸ್‍ಗೆ ಹೋಗಿರೋ ಕಾರಣ ಜೆಡಿಎಸ್ ಮೌನವಾಗಿಯೆ ಕಣದಿಂದ ಹಿಂದೆ ಸರಿಯುತ್ತಾರೆ. ಇದರಿಂದ ಜೆಡಿಎಸ್ ಮತಗಳು ಕೇಶವಮೂರ್ತಿ ವರ್ಚಸ್ಸಿನಿಂದ ಕಾಂಗ್ರೆಸ್‍ಗೆ ಬರುತ್ತೆ ಅನ್ನೋ ಲೆಕ್ಕ ಹಾಕಿಯೇ ಸಿಎಂ ಟೀಂ, ಕಳಲೆ ಕೇಶವಮೂರ್ತಿಯನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ.
ಅಲ್ಲಿಗೆ, ಕಳೆದ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಯಾರು ಪ್ರಬಲ ಪೈಪೋಟಿ ನೀಡಿದ್ದರೋ ಅವರೆ ಇವತ್ತು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಯೋದು ನಿಶ್ಚಿತ. ಕಾಂಗ್ರೆಸ್‍ನ ಈ ಆಪರೇಷನ್ ಲೆಕ್ಕಚಾರಗಳು ವರ್ಕ್ ಔಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಗೋಕೆ ಇನ್ನೂ ಎರಡು ತಿಂಗಳು ಕಾಯಬೇಕಿದೆ.