ಕಲಬುರಗಿ: ನಕಾರಾತ್ಮಕ ಸುದ್ದಿಗಳಿಂದಲೇ ಗುರುತಿಸಿಕೊಳ್ಳುತ್ತಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ರಾಷ್ಟ್ರದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ಐಪಿಎಸ್ 2011ನೇ ಬ್ಯಾಚ್ ಅಧಿಕಾರಿ ಮಂಜುನಾಥ ಸಿಂಗೆ (Manjunath Singe) ಅವರು ಸಿಬಿಐ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (CBI DIG) ಹುದ್ದೆಗೇರುವ ಮೂಲಕ ದೇಶದ ಉದ್ದಗಲಕ್ಕೂ ಕಲಬುರಗಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದೇ ಜ.13ರಂದು ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಸತ್ಯಂ ಶ್ರೀವಾಸ್ತವ ಈ ಕುರಿತಾಗಿ ಆದೇಶ ಹೊರಡಿಸಿದ್ದು, ಸಿಂಗೆ ಅವರು 2028ರ ಫೆ.28ರ ವರೆಗೆ (5 ವರ್ಷ) ಸಿಬಿಐ ಡಿಐಜಿ ಹುದ್ದೆಯನ್ನು ನಿಭಾಯಿಸಲಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್ – ಅಪರಾಧಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ
ಹಳ್ಳಿಯಿಂದ ದಿಲ್ಲಿವರೆಗಿನ ಪಯಣ ಹೇಗಿತ್ತು?
ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಮಂಜುನಾಥ ಅವರು ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಹುಚ್ಚಪ್ಪ ಸಿಂಗೆ ಅವರ ಏಕೈಕ ಪುತ್ರ. 3ನೇ ತರಗತಿವರೆಗೆ ಹುಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು, ಅಪ್ಪನ ವರ್ಗಾವಣೆಗೆ ಅನುಗುಣವಾಗಿ ಚಿತ್ತಾಪುರದ ಶಿಶು ವಿಹಾರ ಶಾಲೆಯಲ್ಲಿ 4ರಿಂದ 7ನೇ ತರಗತಿ ಮುಗಿಸಿದ್ದಾರೆ. ಇದಾದ ಬಳಿಕ ಯಾದಗಿರಿಯ ನ್ಯೂ ಕನ್ನಡ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲು ಮುಗಿಸಿದ್ದಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು ಎಂದು ಮಂಜುನಾಥ ಅವರ ಚಿಕ್ಕಪ್ಪ ಮಲ್ಲಿಕಾರ್ಜುನ ಸಿಂಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ಧಾರವಾಡದ ಕರ್ನಾಟಕ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದರು. ಬಳಿಕ ಸಿಇಟಿ ಬರೆದು ಪ್ರತಿಷ್ಠಿತ ಸುರತ್ಕಲ್‍ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸೋದಕ್ಕೆ ಆರೇ ತಿಂಗಳು ಬಾಕಿ ಇತ್ತು. ಆಗ ಅಮೆರಿಕ ಮೂಲದ ಪ್ರತಿಷ್ಠಿತ ಐಬಿಎಂ ಕಂಪನಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮಂಜುನಾಥ ಸಿಂಗೆ ಅವರು ಆಯ್ಕೆಯಾದರು. ಪಿಯುಸಿ ಹಂತದಿಂದಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ್ದ ಇವರು, ಐಬಿಎಂ ಸೇರ್ಪಡೆಗೊಂಡ ಬೆನ್ನಲ್ಲೇ ಯುಪಿಎಸ್ಸಿ ಪರೀಕ್ಷೆ ಎದುರಿಸಲು ಅಗತ್ಯವಿರುವ ಅಧ್ಯಯನವನ್ನು ಮತ್ತಷ್ಟು ಪ್ರಖರಗೊಳಿಸಿದ್ದರು. 2009-10ರಲ್ಲಿ ಐಆರ್‍ಎಸ್ ಉತ್ತೀರ್ಣರಾಗಿ ಗೋವಾದ ಆದಾಯ ತೆರಿಗೆ ಇಲಾಖೆಯಲ್ಲಿ 1 ವರ್ಷ ಸೇವೆ ಸಲ್ಲಿಸುತ್ತಲೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿ 2010-11ರಲ್ಲಿ ಐಪಿಎಸ್ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
ಆರಂಭಿಕ ತರಬೇತಿಯ ಬಳಿಕ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಎಎಸ್ಪಿ ಆಗಿ 1 ವರ್ಷ ಸೇವೆ ಸಲ್ಲಿಸಿದರು. ಇದಾದ ನಂತರ ಗಡಚಿರೋಲಿ ವಿಭಾಗದ ನಕ್ಸಲ್ ನಿಗ್ರಹ ಪಡೆಯಲ್ಲೂ ಎಎಸ್ಪಿ ಆಗಿ 2 ವರ್ಷ ಸೇವೆ ಸಲ್ಲಿಸಿದರು. ಆಮೇಲೆ ಪಾಲ್ಗಾರ್ ಎಸ್ಪಿಯಾಗಿ, ನಂತರ ಮುಂಬೈ ವಸಾಯಿ ಪ್ರಾಂತ್ಯದ ಡಿಸಿಪಿ, ನಂತರ ಬಾಂದ್ರಾ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಈ ಬೆನ್ನಲ್ಲೇ ಕೋವಿಡ್ ಅವಧಿ ಮುಗಿಯುತ್ತಿದ್ದಂತೆಯೇ ಸಿಬಿಐ ಅಧಿಕಾರಿಯಾಗಿ ಸೇವೆ ಆರಂಭಿಸಿದ ಕೂಡಲೇ ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಅಧಿಕಾರಿಗಳ ತಂಡದಲ್ಲಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡರು.
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಸಿಬಿಐ ಎಸ್ಪಿಯಾಗಿ ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮಂಜುನಾಥ ಸಿಂಗೆ ಅವರಿಗೆ ಇದೀಗ ಸಿಬಿಐ ಡಿಐಜಿ ಹುದ್ದೆ ಒಲಿದು ಬಂದಿದೆ. ಇದು ತವರೂರು ಅಫಜಲಪುರ ಹಾಗೂ ತವರು ಜಿಲ್ಲೆ ಕಲಬುರಗಿ ಸೇರಿದಂತೆ ಇಡೀ ರಾಜ್ಯದ ಯುವಪೀಳಿಗೆಗೆ ಹೆಮ್ಮೆಯಾಗಿದೆ. ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು
ಮಣಿಪುರ ಗಲಭೆ, ನೀಟ್ ರಗಳೆ ತನಿಖೆ
ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಜವಾಬ್ದಾರಿ ಐಪಿಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರ ಹೆಗಲಿಗೇರಿತ್ತು. ಈ ಕುರಿತು ಸಮಗ್ರ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದ ತಂಡದ ಭಾಗವಾಗಿದ್ದ ಸಿಂಗೆ ಅವರಿಗೆ ನೀಟ್ ಪರೀಕ್ಷಾ ರಾದ್ಧಾಂತದ ತನಿಖೆಯ ಹೊಣೆಯನ್ನೂ ಕೇಂದ್ರ ಸರ್ಕಾರ ವಹಿಸಿತ್ತು. ಈ ಎರಡೂ ಜವಾಬ್ದಾರಿಗಳನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ ಅವರಿಗೆ ಈಗ ಸಿಬಿಐ ಡಿಐಜಿ ಹುದ್ದೆ ಅರಸಿ ಬಂದಿದೆ. ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್