ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುತ್ತೀರಿ ಎಂದು ಹೂಲಿ ಮಠದ ಉಮೇಶ್ವರ ಶಿವಚಾರ್ಯ ಸ್ವಾಮೀಜಿ ಅವರು ಆಶೀರ್ವಾದ ಮಾಡಿ, ಭವಿಷ್ಯ ನುಡಿದಿದ್ದಾರೆ.
ಇಂದು ಬಿಎಸ್‍ವೈ ಅವರು, ಸವದತ್ತಿ ತಾಲೂಕಿನ ಹೂಲಿ ಸಾಂಬಯ್ಯನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಾಲಲೀಲಾ ಸಂಗಮೇಶ್ವರ ಗದ್ದುಗೆ ದರ್ಶನ ಪಡೆದ ಅವರು ಉಮೇಶ್ವರ ಸ್ವಾಮೀಜಿ ಅವರಿಂದ ಅಶೀರ್ವಾದ ಕೇಳಿದ್ದರು.
ಬಿಎಸ್‍ವೈ ಅವರು ಮನವಿಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿಗಳು, ಮಠದ ಆಶೀರ್ವಾದ ನಿಮ್ಮ ಮೇಲಿದೆ. ಸದ್ಯದಲ್ಲೇ ನೀವು ಮತ್ತೆ ಸಿಎಂ ಆಗುತ್ತೀರಿ ಎಂದು ಭವಿಷ್ಯ ನುಡಿದರು. ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಂದಹಾಸದ ಮೊಗದಲ್ಲಿ ಬಿಎಸ್‍ಬೈ ಹೊರಬಂದರು.
ಆ ಬಳಿಕ ಮಾತನಾಡಿದ ಬಿಎಸ್‍ವೈ ಅವರು, ಬಾಲಲೀಲಾ ಸಂಗಮೇಶ್ವರ ಗದ್ದುಗೆ ದರ್ಶನ ಪಡೆದಿದ್ದೇನೆ. ಒಳ್ಳೆ ಕಾಲ ಬಂದರೆ ಮತ್ತೆ ಮಠಗಳಿಗೆ ಒಳ್ಳೆಯದನ್ನ ಮಾಡುತ್ತೇನೆ. ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದರು. ಅಲ್ಲದೇ ರಾಜ್ಯ ಸರ್ಕಾರದ 20 ಜನ ಶಾಸಕರು ಸಿಎಂ ಎಚ್‍ಡಿಕೆ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಗೊಂದಲ ವಾತಾವರಣ ನಿರ್ಮಾಣ ಆಗಿದ್ದು, ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಸಾಲಾಮನ್ನಾ ಮಾಡುತ್ತೇನೆ ಎಂದಿದ್ದ ಸಿಎಂ ನಾಲ್ಕೂವರೆ ಸಾವಿರ ಕೋಟಿ ಸಾಲ ಮಾಡಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ನಂಬಿಕೆದ್ರೋಹ, ವಿಶ್ವಾಸದ್ರೋಹ ಮಾಡಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸದ ಬೇಜವಾಬ್ದಾರಿ ಮುಖ್ಯಮಂತ್ರಿಯ ಸರ್ಕಾರವನ್ನು ಜನ ಖಂಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಆದರೆ ಶ್ರೀಗಳ ಭವಿಷ್ಯದ ಆಶೀರ್ವಾದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv