ಕಲಬುರಗಿ: ತಾಲೂಕಿನ ಬಬಲಾದ ಗ್ರಾಮದ ಶಾಲೆಯ ಆವರಣದ ಬಾವಿಯಲ್ಲಿ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ.
ಮೃತ ವಿದ್ಯಾರ್ಥಿಯನ್ನು ಗುರು (15) ಎಂದು ಗುರುತಿಸಲಾಗಿದ್ದು, ಚಿಂಚೋಳಿ ತಾಲೂಕಿನ ನಿವಾಸಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ – ಯುವತಿ ಸಾವು
ಗುರು ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ಮೂರು ದಿನಗಳಿಂದ ಶಾಲೆಯಿಂದ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆದಿತ್ತು. ಮಂಗಳವಾರ ಬೆಳಗ್ಗೆ ಶಾಲೆಯ ಆವರಣದಲ್ಲಿರುವ ಬಾವಿಯಲ್ಲಿ ಅವನ ಶವ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಶಾಲೆಯ ಬೈಕ್ ತೆಗೆದುಕೊಂಡು ಹೋಗಿ ಗೋಡೆಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನ ಡೋಮ್ ಹಾನಿಗೊಳಗಾಗಿತ್ತು ಎನ್ನಲಾಗಿದೆ. ಈ ವಿಷಯವಾಗಿ ಸಿಬ್ಬಂದಿ ಪ್ರಿನ್ಸಿಪಾಲ್ ಗಮನಕ್ಕೆ ತಂದಿದ್ದರು. ಬಳಿಕ ಪ್ರಿನ್ಸಿಪಾಲ್ ಬೈದು, ಬೈಕ್ ರಿಪೇರಿ ವೆಚ್ಚವನ್ನು ಕುಟುಂಬದಿಂದ ಭರಿಸಲು ಸೂಚಿಸಿದ್ದರೆಂಬ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆ ಕಲಬುರಗಿ ಸಬ್-ಅರ್ಬನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.

