Connect with us

Bengaluru City

ಕೊರೊನಾ ರೋಗಿ ಸಾವು – ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬೀಗ, ಸಿಬ್ಬಂದಿಗೆ ಕ್ವಾರಂಟೈನ್

Published

on

– ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೋಗಿ ಸಾವು
– ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಬೆಂಗಳೂರು: ಕೊರೊನಾ ಸೋಂಕಿತ ರೋಗಿ ನಂಬರ್ 177 ಸಾವಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯ ಎಡವಟ್ಟು ಕಾರಣವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇರವಾಗಿ ದೂರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿಯ ಖಾಸಗಿ ಆಸ್ಪತ್ರೆಯು ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡಿತ್ತು. ಆದರೆ ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದಾರೆ. ಆಗ ಸ್ಯಾಂಪಲ್ ತೆಗೆದುಕೊಂಡಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಸಾವು- ಮತ್ತೆ ಆರು ಮಂದಿಗೆ ಸೋಂಕು

ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬೀಗ ಹಾಕಲಾಗಿದ್ದು, ಅಲ್ಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ರೋಗಿ ನಂಬರ್ 177 ಅವರಿಗೆ ಹೇಗೆ ಸೋಂಕು ತಗುಲಿತ್ತು ಎನ್ನುವ ಬಗ್ಗೆ ಪೊಲೀಸರು ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಐಸಿಯುನಲ್ಲಿದ್ದ ರೋಗಿ ನಂಬರ್ 102 ವಾರ್ಡ್ ಗೆ ಶಿಫ್ಟ್ ಆಗಿದ್ದಾರೆ. ದೇಶದಲ್ಲೇ ಕೊರೊನಾಗೆ ಮೊದಲ ಕಂಡರೂ ಕಲಬುರಗಿ ಖಾಸಗಿ ಆಸ್ಪತ್ರೆ ಬುದ್ಧಿ ಕಲಿತಿಲ್ಲ. ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಇಡೀ ಕಲಬುರಗಿ ಜಿಲ್ಲೆಗೆ ಮಗದೊಮ್ಮೆ ಆತಂಕ ಎದುರಾಗಿದೆ. ಹೀಗಾಗಿ ಜನನಿಬಿಡ ಪ್ರದೇಶದಲ್ಲಿ ಓಡಾಡುವಾಗ ಮಾಸ್ಕ್ ಕಡ್ಡಾಯ ಅಂತ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

ಲಾಕ್‍ಡೌನ್ ಮುಗಿದ ಮೇಲೆ ಏನು ಮಾಡಬೇಕು ಎನ್ನುವ ಬಗ್ಗೆ ಸಮಿತಿ ಮಾಡಿದ್ದೇವೆ. ಡಾ.ದೇವಿಶೆಟ್ಟಿ, ಡಾ ಮಂಜುನಾಥ್, ಸಿ.ನಾಗರಾಜ್, ನಿಮ್ಹಾನ್ಸ್ ನ ವಿ ರವಿ, ಎಂ.ಕೆ.ಸುದರ್ಶನ್ ನೇತೃತ್ವದ ಕಮಿಟಿಯು ವರದಿ ಕೊಟ್ಟಿದೆ. ಅದನ್ನು ಸಿಎಂ ಯಡಿಯೂರಪ್ಪ ಪರಿಶೀಲನೆ ಮಾಡುತ್ತಿದ್ದಾರೆ. ನಿಜಾಮುದ್ದೀನ್ ಪ್ರಕರಣದ ಬಗ್ಗೆ ಪೊಲೀಸರು ವರದಿ ಕೊಟ್ಟಿದ್ದಾರೆ ಎಂದರು.

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 808 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇನ್ನೂ 581 ಜನರು ಬೇರೆ ರಾಜ್ಯದಲ್ಲಿದ್ದಾರೆ. ಅವರು ಕರ್ನಾಟಕಕ್ಕೆ ಬಂದಿಲ್ಲ. ಕೊರೊನಾ ಸೋಂಕಿತರಲ್ಲಿ 71 ಜನ ವಿದೇಶಿ ಪ್ರಯಾಣಿಕರು ಇದ್ದಾರೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ದೆಹಲಿ ಸೇರಿದಂತೆ ಬೇರೆ ಪ್ರಾಥಮಿಕ ಸಂಪರ್ಕದಿಂದ 110 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕಿಯೋಸ್ಕ್ ಮಾದರಿಯಂತೆ ರಾಜ್ಯದಲ್ಲಿ ಒಂದು ಪ್ರಯೋಗ ನಡೆಯುತ್ತಿದೆ. ನಂಜನಗೂಡು ನಿಗೂಢ ರಿಪೋರ್ಟ್ ಇನ್ನು ಕೂಡ ಬಂದಿಲ್ಲ. ಏಪ್ರಿಲ್ 12ರಂದು ಆಂಟಿ ಬಾಡಿ ಟೆಸ್ಡ್ ಕಿಟ್ ಬರಲಿದೆ. ಅದಾದ ಬಳಿಕ ರ್ಯಾಂಡಮ್ ಕೊರೊನಾ ಟೆಸ್ಟಿಂಗ್ ಪ್ರಾರಂಭವಾಗಲಿದೆ ಎಂದರು.

ಲಾಕ್‍ಡೌನ್ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಸಿಎಂ ಯಡಿಯೂರಪ್ಪ ಅವರು ಯಾವುದೇ ಪತ್ರವನ್ನು ಕೇಂದ್ರಕ್ಕೆ ಬರೆದಿಲ್ಲ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಪಾಸ್ ಮಾಡುವ ಬಗ್ಗೆ ಚಿಂತನೆ ನಡೆದಿಲ್ಲ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *