ಕಲಬುರಗಿ: ಬುಧವಾರ ಜಿಲ್ಲೆಯಲ್ಲಿ ಕಾರ್ಮಿಕರ ಮುಷ್ಕರದ ಹೆಸರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚುವಂತೆ ಮಾಲೀಕರಿಗೆ ಅವಾಜ್ ಹಾಕಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಭಾರತ ಬಂದ್ ಹಿನ್ನಲೆ ಕಲಬುರಗಿಯಲ್ಲಿ ಮೊದಲು ಕಾರ್ಮಿಕರು ಮುಷ್ಕರಕ್ಕೆ ಇಳಿದಿದ್ದರು. ಆದರೆ ಈ ಮುಷ್ಕರ ಬಳಿಕ ಸಿಎಎ ವಿರೋಧಿ ಪ್ರತಿಭಟನೆಗೆ ತಿರುಗಿದ್ದು, 10 ಸಾವಿರಕ್ಕೂ ಹೆಚ್ಚು ಪೌರತ್ವ ವಿರೋಧಿಗಳು ಹೋರಾಟ ನಡೆಸಿದರು. ಈ ವೇಳೆ ನಗರದ ಸೂಪರ್ ಮಾರ್ಕೆಟ್ ಬಳಿಯ ಖಾದಿ ಬಂಡಾರಕ್ಕೆ ಕೆಲ ಕಿಡಗೇಡಿಗಳು ನುಗ್ಗಿ ಅಲ್ಲಿರುವ ಜರ್ಕಿನ್‍ಗಳನ್ನು ಹರಿದು, ಅಂಗಡಿಗಳನ್ನು ಬಂದ್ ಮಾಡುವಂತೆ ಮಾಲೀಕರಿಗೆ ಅವಾಜ್ ಹಾಕಿ ರೌಡಿತನವನ್ನ ಪ್ರದರ್ಶಿಸಿದ್ದಾರೆ.
Advertisement
ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ಆ ಕಿಡಿಗೇಡಿಗಳನ್ನು ಅಲ್ಲಿಂದ ಕಳುಹಿಸಿದ್ದು, ಈ ಪುಂಡರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಕಿಡಿಗೇಡಿಗಳು ಕೈಯಲ್ಲಿ ರಾಡ್ ಹಿಡಿದು ಅಂಗಡಿ ಮಾಲೀಕರಿಗೆ ಅವಾಜ್ ಹಾಕಿರುವ ದೃಶ್ಯ, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರುವ ದೃಶ್ಯಗಳು ಸೆರೆಯಾಗಿದೆ. ವಿಡಿಯೋ ನೋಡಿದವರು ಈ ಪುಡಿ ರೌಡಿಗಳ ಮೇಲೆ ಪೊಲೀಸರು ಯಾವಾಗ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.