ಕಲಬುರಗಿ: ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾದ ಹಿನ್ನೆಲೆ ಅವರ ಲಕ್ಷಾಂತರ ಸಂಖ್ಯೆಯ ಭಕ್ತರು ದುಃಖತಪ್ತರಾಗಿದ್ದಾರೆ. ವಿವಿಧ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಯಾನಗುಂದಿಗೆ ಬರುತ್ತಿದ್ದಾರೆ. ಭಕ್ತರಲ್ಲಿ ಹಿಂದುಗಳಂತೆ ಮುಸ್ಲಿಮರು ಇದ್ದಾರೆ. ಯಾನಗುಂದಿಯ ಮಾಣಿಕ್ಯಗಿರಿ ಬೆಟ್ಟ ಹಿಂದು ಮುಸ್ಲಿಂರ ಭಾವೈಕ್ಯತೆಯ ಕೇಂದ್ರವಾಗಿದ್ದರಿಂದ ಮುಸ್ಲಿಂರು ಸಹ ಮಾತೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಾತೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.
ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾಗಿರುವ ಮಾಣಿಕ್ಯಗಿರಿ ಬೆಟ್ಟ ಸುಮಾರು ವರ್ಷಗಳಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆ ಕೇಂದ್ರವಾಗಿದೆ. ಬೆಟ್ಟದ ಹಜರತ್ ಮೌಲಾ ಅಲಿ ದರ್ಗಾಕ್ಕೂ ಮಾತಾ ಮಾಣಿಕ್ಕೇಶ್ವರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಹಿಂದೂ ಮುಸ್ಲಿಂ ಭಕ್ತರು ಸಾಗರೋಪಾದಿಯಲ್ಲಿ ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ. 800 ವರ್ಷಗಳ ಇತಿಹಾಸವಿರುವ ಹಜರತ್ ಮೌಲಾ ಅಲಿ ದರ್ಗಾದಲ್ಲೇ ಮಾತಾ ಮಾಣಿಕೇಶ್ವರಿ ಮೊದಲು ವಾಸಗಿದ್ದರು.
Advertisement
Advertisement
ದರ್ಗಾದಲ್ಲಿನ ಪುರಾತನ ಬೃಹತ್ ಬಸರಿ ಮರದಲ್ಲೇ ಮಾತಾ ಮಾಣಿಕೇಶ್ವರಿ ಕುಳಿತುಕೊಳ್ಳುತ್ತಿದ್ದರು. ಆ ಮರದಲ್ಲೇ ತಮ್ಮ ಚಿಕ್ಕವಯಸ್ಸಿನಿಂದ ಆಶ್ರಯಪಡೆದಿದ್ದರು. ಬಳಿಕ ಬೆಟ್ಟದಲ್ಲೆ ಶಿವಲಿಂಗ ಸ್ಥಾಪಿಸಿ ವಾಸಿಸತೊಡಗಿದರು. ಹೀಗಾಗಿ ದರ್ಗಾಕ್ಕೆ ಬರುವ ಭಕ್ತರೆಲ್ಲಾ ಮಾತೆಯ ಭಕ್ತರು. ಮಾತೆಯ ದರ್ಶನಕ್ಕೆ ಬರುವ ಭಕ್ತರೆಲ್ಲಾ ದರ್ಗಾಕ್ಕೂ ಬಂದು ಹೋಗುತ್ತಾರೆ. ಹೀಗಾಗಿ ಮಾತಾ ಮಾಣಿಕೇಶ್ವರಿಯ ಮಾಣಿಕ್ಯಗಿರಿ ಭಾವೈಕ್ಯತೆಯ ಸಂಕೇತದಂತಿದೆ.
Advertisement
Advertisement
ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.