ಕಲಬುರಗಿ: ಬೀದರ್-ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ (CET Exam) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು. ಇದೀಗ ಆ ಪ್ರಕರಣ ಮಾಸುವ ಮುನ್ನವೆ ಕಲಬುರಗಿಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆದ ಪರಿಣಾಮ ಬ್ರಾಹ್ಮಣರ (Brahmin Community) ತಾಳ್ಮೆ ಕಟ್ಟೆ ಒಡೆದಿದೆ.
ಕಲಬುರಗಿಯಲ್ಲಿ ನಡೆದ ಕೆಇಎ ಪರೀಕ್ಷೆ (KEA Exam) ವೇಳೆ ಮಂಗಳಸೂತ್ರ ತೆಗೆಸಿದ ಪ್ರಕರಣ ವಿವಾದಕ್ಕೀಡಾಗಿತ್ತು. ಅದಾದ ಬಳಿಕ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪರಿಣಾಮ ರಾಜ್ಯದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಪ್ರಕರಣಗಳು ಮಾಸುವ ಮುನ್ನ ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ಕಲಬುರಗಿಯ ಸಂತ ಮೇರಿ ಪರೀಕ್ಷಾ ಕೇಂದ್ರಕ್ಕೆ ಬಂದ ಶ್ರೀಪಾದ ಎಂಬ ವಿದ್ಯಾರ್ಥಿಯ ಜನಿವಾರ ತೆಗೆದ್ರೆ ಮಾತ್ರ ಪರೀಕ್ಷೆಗೆ ಅವಕಾಶ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರಂತೆ, ಹೀಗಾಗಿ ಒಲದ ಮನಸ್ಸಿನಿಂದ ಶ್ರೀಪಾದ ತನ್ನ ಜನಿವಾರ ತೆಗೆದು ತಂದೆ ಸುಧೀರ ಅವರ ಕೈಗೆ ಕೊಟ್ಟು ನೀಟ್ ಪರೀಕ್ಷೆ ಬರೆದಿದ್ದಾನೆ.
ಇನ್ನೂ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಷಯಕ್ಕೆ ತಿಳಿಯುತ್ತಿದ್ದಂತೆ ಸಂತ ಮೇರಿ ಪರೀಕ್ಷಾ ಮುಂಭಾಗದಲ್ಲಿ ಬ್ರಾಹ್ಮಣ ಸಭಾ ಹಾಗೂ ಎಬಿವಿಪಿ ಕಾರ್ಯಕರ್ತರು ಜಮಾವಣೆಗೊಂಡು, ಪ್ರತಿ ಬಾರಿ ಪರೀಕ್ಷೆಗಳು ಬಂದ್ರೆ ಸಾಕು ಸರ್ಕಾರ ಜನಿವಾರಕ್ಕೆ ಕೈ ಹಾಕುತ್ತಿದೆ. ಈ ಮೂಲಕ ಸನಾತನ ಧರ್ಮದ ನಂಬಿಕೆ ಮೇಲೆ ಕೈ ಹಾಕುತ್ತಿದೆ. ಅಂತಾ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಪರೀಕ್ಷಾ ಕೇಂದ್ರದ ಮುಂದೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಜನಿವಾರ ತೆಗೆದ ಪರೀಕ್ಷಾ ಕೇಂದ್ರದ ಮುಂದೆ ಅರ್ಚಕರ ಸಮ್ಮುಖದಲ್ಲಿ ಶ್ರೀಪಾದಗೆ ಜನಿವಾರ ಹಾಕಿಸಿದ್ದರು.
ಈ ವೇಳೆ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಶ್ರೀಪಾದ ಒಲ್ಲದ ಮನಸ್ಸಿನಿಂದ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದೇನೆ. ಇನ್ನೂ ಪರೀಕ್ಷೆ ವೇಳೆ ಮನಸ್ಸಿಗೆ ಅಘಾತವಾದ ಹಿನ್ನಲೆ ಕ್ರಮ ಸಂಖ್ಯೆ ಸಹ ತಪ್ಪು ನಮೂದಿಸಿದ್ದೇನೆ. ಹೀಗಾಗಿ ಮತ್ತೆ ಪರೀಕ್ಷೆಗೆ ಅವಕಾಶ ಕೊಡಬೇಕು ಅಂತಾ ಆಗ್ರಹಿಸಿದ್ದಾನೆ.
ಪರೀಕ್ಷೆಯ ಬಳಿಕ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ತೆರಳಿದ ವಿದ್ಯಾರ್ಥಿ ಶ್ರೀಪಾದ ಜನಿವಾರ ತೆಗೆಸಿದ ನೀಟ್ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾನೆ.