ಕಲಬುರಗಿ: ಬಿಸಿಎಂ ಹಾಸ್ಟೆಲ್‍ನಲ್ಲಿ ಆರಾಮಾಗಿ ಓದಿಕೊಂಡಿದ್ದ ವಿದ್ಯಾರ್ಥಿನಿಯರನ್ನು ಇದ್ದಕ್ಕಿದ್ದ ಹಾಗೆ ಲಾಡ್ಜ್ ಗೆ ಶಿಫ್ಟ್ ಮಾಡುವಂತೆ ಒತ್ತಡ ಹಾಕಲಾಗಿದೆ. ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು. ಕಲಬುರಗಿಯ ದೇವರಾಜ್ ಅರಸು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಇಷ್ಟು ದಿನ ಸುಸಜ್ಜಿತವಾಗಿರೋ ಹಾಸ್ಟೆಲ್‍ನಲ್ಲಿ ಆರಾಮಾಗಿ ಓದಿಕೊಂಡಿದ್ದರು. ಆದರೆ ಇದೀಗ ವಿದ್ಯಾರ್ಥಿನಿಯರನ್ನು ಏಕಾಏಕಿಯಾಗಿ ಬಿಸಿಎಂ ಇಲಾಖೆ ಅಧಿಕಾರಿ ಮೆಹಬೂಬ್ ಪಾಷಾ, ಲಾಡ್ಜ್ ಗೆ ಶಿಫ್ಟ್ ಆಗುವಂತೆ ಒತ್ತಡ ಹೇರಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ಬೀಗ ಹಾಕಿ ಹಾಸ್ಟೆಲ್ ಬಿಟ್ಟು ಬರಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪಂಚಶೀಲ ಮತ್ತು ಶಾಸ್ತ್ರಿನಗರದಲ್ಲಿರುವ ಎರಡು ಬಿಸಿಎಂ ಹಾಸ್ಟೆಲ್‍ಗಳಲ್ಲಿ ಸುಮಾರು 200 ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟ ಕೂಡ ಇಲ್ಲ. ಆದರೆ ಕಲಬುರಗಿ ಲಾಡ್ಜ್ ಮಾಲೀಕರ ಹಣದಾಸೆಗೆ ಗುರಿಯಾದ ಬಿಸಿಎಂ ಇಲಾಖೆ ಅಧಿಕಾರಿ ಮೆಹಬೂಬ್ ಪಾಷಾ ಮಹಿಳಾ ವಸತಿ ನಿಲಯವನ್ನೇ ಲಾಡ್ಜ್ ಗೆ ಶಿಫ್ಟ್ ಮಾಡಿದ್ದಾನೆ. ಈ ಕುರಿತು ವಾಟ್ಸಪ್ ವಾಯ್ಸ್ ರೆಕಾರ್ಡ್‍ನ್ನು ಹಾಸ್ಟೆಲ್ ವಾರ್ಡನ್‍ಗಳಿಗೆ ಕಳುಹಿಸಿದ್ದಾನೆ. ಇದಕ್ಕೆ ವಿರೋಧ ಮಾಡಿದರೆ ವಾರ್ಡನ್ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾನೆ.
ಸರ್ಕಾರ ಕೊಟ್ಟಿರೋ ವಸತಿ ನಿಲಯವನ್ನು ಹಣದಾಸೆಗಾಗಿ ಸ್ವತಃ ಅಧಿಕಾರಿಯೇ ಸೇಲ್‍ಗಿಟ್ಟಿದ್ದಾನೆ. ಸಂಬಂಧಪಟ್ಟ ಅಧಿಕಾರಿಗಳು ಭ್ರಷ್ಟ ಬಿಸಿಎಂ ಅಧಿಕಾರಿ ಮೆಹಬೂಬ್ ಪಾಷಾ ವಿರುದ್ಧ ಕ್ರಮ ಜರುಗಿಸಿ ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗಬೇಕಿದೆ.