ಕಲಬುರಗಿ: ಜೂನ್ 22ರಂದು ಕಲಬುರಗಿಯ ಹೇರೂರ ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಇಡೀ ಜಿಲ್ಲಾಡಳಿತವೇ ಆ ಗ್ರಾಮದಲ್ಲಿ ಠಿಕಾಣಿ ಹೂಡಿದೆ. ಇನ್ನೂ ಡಾಂಬರಿಕರಣವೇ ಕಾಣದ ರಸ್ತೆಗಗಳಿಗೆ ಇದೀಗ ಡಾಂಬರ್ ಭಾಗ್ಯ ಕೂಡಿ ಬಂದಂತಾಗಿದೆ.
ಹೌದು. ದಶಕಗಳಿಂದ ಡಾಂಬರೀಕರಣ ಕಾಣದ ಕಲಬುರಗಿ ಜಿಲ್ಲೆ ಅಫಜಲ್ಪುರ ಮತಕ್ಷೇತ್ರದ ಹೇರೂರ(ಬಿ) ಗ್ರಾಮದಲ್ಲಿ ಸಿಎಂ ಬರುತ್ತಾರೆ ಎಂದು ಹೊಸ ರಸ್ತೆಯನ್ನೇ ನಿರ್ಮಿಸುತ್ತಿದ್ದಾರೆ. ಈ ಮೂಲಕ ಜೂನ್ 22ರಂದು ಗ್ರಾಮ ವಾಸ್ತವ್ಯಕ್ಕೆ ಬರುವ ಸಿಎಂಗೆ ಅದ್ಧೂರಿ ಸ್ವಾಗತ ನೀಡಲು ತಯಾರಿ ನಡೆದಿದೆ.
Advertisement
Advertisement
ಇದನ್ನೇ ಅಸ್ತ್ರ ಮಾಡಿಕೊಂಡ ಇಲ್ಲಿನ ಗ್ರಾಮಸ್ಥರು, ರಸ್ತೆ ನಿರ್ಮಿಸಿದಂತೆ ಒಂದು ಬಸ್ ಸೌಕರ್ಯ ನೀಡಿದ್ದರೆ, ಈ ಕುಗ್ರಾಮದ ವಿದ್ಯಾರ್ಥಿಗಳು ಮತ್ತು ರೈತರು ಕಲಬುರಗಿ ನಗರಕ್ಕೆ ಸಲೀಸಾಗಿ ಹೋಗಬಹುದು. ಹೀಗಾಗಿ ಸಿಎಂ ಇತ್ತ ಗಮನಹರಿಸಲಿ ಎಂದು ವಿದ್ಯಾರ್ಥಿಗಳಾದ ರಾಜೇಶ್, ವಿವೇಕ್ ಹೇಳಿದ್ದಾರೆ.
Advertisement
Advertisement
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಫರ್ತಾಬಾದ್ ಹೋಬಳಿಯಿಂದ ಹೇರೂರ ಗ್ರಾಮ 25 ಕಿಮೀ ದೂರವಿದ್ದು, ಈ ಗ್ರಾಮಕ್ಕೆ ಫರ್ತಾಬಾದ್‍ನಿಂದ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಆದರೆ ಇದೀಗ ಸಿಎಂ ಆಗಮನದ ಹಿನ್ನೆಲೆಯಲ್ಲಿ ಫರ್ತಾಬಾದ ಹೋಬಳಿಯಿಂದ ಹೇರೂರ(ಬಿ)ಗ್ರಾಮದವರೆಗೆ ರಸ್ತೆ ನಿರ್ಮಿಸಲಾಗುತ್ತಿದೆ. ಇದೆಲ್ಲ ಓಕೆ ಆದರೆ ಈ ಹಿಂದೆ ನೀವು ಇದೇ ಅಫಜಲ್ಪುರ ಕ್ಷೇತ್ರದ ಮಣ್ಣೂರಿನಲ್ಲಿ ಸಹ 2006ರಲ್ಲಿ ಸಿಎಂ ಆಗಿದ್ದಾಗ ವಾಸ್ತವ್ಯ ಮಾಡಿದ್ದೀರಿ. ಅಲ್ಲಿ ನೀವು ನೀಡಿದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿವೆ. ಹೀಗಾಗಿ ಹೇರೂರ(ಬಿ)ಗ್ರಾಮದ ಜೊತೆ ಮಣ್ಣುರ ಗ್ರಾಮಕ್ಕೆ ನೀಡಿದ ಭರವಸೆ ಪೂರೈಸಿ ಎಂದು ಅಫಜಲ್ಪುರ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಆಗ್ರಹಿಸಿದ್ದಾರೆ.
ಸದ್ಯ ಮುಖ್ಯಮಂತ್ರಿಯವರ ಆಗಮನಕ್ಕಾಗಿ ಹೇರೂರ(ಬಿ) ಗ್ರಾಮದ ಜನ ಅಪಾರ ನೀರಿಕ್ಷೆಯಿಟ್ಟು ಕಾದು ಕುಳಿತಿದ್ದಾರೆ. ಆದರೆ ಈ ಹಿಂದೆ ವಾಸ್ತವ್ಯ ಮಾಡಿದಂತೆ ಆಶ್ವಾಸನೆ ನೀಡಿ ಸಿಎಂ ಮಲಗಿ ಹೋಗಬಾರದು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.