– ಮೈತ್ರಿ ಸರ್ಕಾರದಲ್ಲಿ ಮತ್ತೆ ಬಿರುಕು
ಕಲಬುರಗಿ: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷರಾಗಲು ಸಚಿವ ಹೆಚ್.ಡಿ ರೇವಣ್ಣ ಇದೀಗ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಸಚಿವರ ಕನಸಿಗೆ ಬ್ರೇಕ್ ನೀಡಲು ರಣತಂತ್ರ ರೂಪಿಸುತ್ತಿದೆ ಎಂಬ ಮಾಹಿತಿ ಮೈತ್ರಿ ಅಂಗಳದಲ್ಲಿ ಹರಿದಾಡುತ್ತಿದೆ.
ಅಧ್ಯಕ್ಷ ಸ್ಥಾನ ಮತ್ತೆ ಪಡೆಯಲು ರಾಜ್ಯದ ಒಟ್ಟು 13 ಹಾಲು ಒಕ್ಕೂಟ ಮಂಡಳಿಗಳಿಂದ ತಮಗೇ ಬೆಂಬಲಿಸುವರನ್ನೇ ರಾಜ್ಯ ಮಟ್ಟದ ನಿರ್ದೇಶಕರನ್ನಾಗಿ ನೇಮಕ ಮಾಡಿ ಕಳುಹಿಸುವಂತೆ ಹೆಚ್.ಡಿ.ರೇವಣ್ಣ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಈ ಮೂಲಕ ಅಧ್ಯಕ್ಷ ಪಟ್ಟಕ್ಕಾಗಿ ರೇವಣ್ಣ ಲಾಬಿ ಜೋರಾಗಿ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಇನ್ನು ಇದರ ಮೊದಲ ಹೆಜ್ಜೆ ಎಂಬಂತೆ ಕಲಬುರಗಿ ಹಾಲು ಒಕ್ಕೂಟದಿಂದ ಸಚಿವ ಬಂಡೆಪ್ಪ ಖಾಶಂಪುರ ಸಹೋದರ ಮಾರುತಿ ಖಾಶಂಪುರ ಅವರನ್ನು ರಾಜ್ಯ ಮಟ್ಟದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇನ್ನು ಮೈತ್ರಿ ಧರ್ಮದಂತೆ ಕೆಎಂಎಫ್ ಅಧ್ಯಕ್ಷ ಪಟ್ಟ ಕಾಂಗ್ರೆಸ್‍ಗೇ ಸಿಗಬೇಕು. ಈ ಕಾರಣಕ್ಕೆ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ಕೊಡಿಸಲು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಅಖಾಡಕ್ಕೆ ಇಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಬಳ್ಳಾರಿ ಹಾಲು ಒಕ್ಕೂಟದಿಂದ ಶಾಸಕ ಭೀಮಾನಾಯ್ಕ್ ರನ್ನು ರಾಜ್ಯಮಟ್ಟಕ್ಕೆ ನಿರ್ದೇಶಕರಾಗಿ ನೇಮಕ ಮಾಡಿಸಿ ಕಳುಹಿಸಿದ್ದು, ಯಾವುದೇ ಕಾರಣಕ್ಕೂ ಅಧ್ಯಕ್ಷ ಪಟ್ಟ ರೇವಣ್ಣರಿಗೆ ಸಿಗದಂತೆ ಕೈ ನಾಯಕರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯದ ಎಲ್ಲ ಒಕ್ಕೂಟದ ನಿರ್ದೇಶಕರಿಗೆ ಕೈ ಪಕ್ಷದ ಬೆಂಬಲಿತ ನಿರ್ದೇಶಕರನ್ನೆ ರಾಜ್ಯ ಮಟ್ಟದ ನಿರ್ದೇಶಕ ಹುದ್ದೆಗೆ ಆಯ್ಕೆ ಮಾಡಿ ಕಳುಹಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.
Advertisement
ಈ ಮೂಲಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂಡಿದ್ದ ಬಿರುಕು, ಈಗ ಕೆಎಂಎಫ್ ಅಧ್ಯಕ್ಷ ಪಟ್ಟ ವಿಷಯದಲ್ಲಿ ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಸಾಧ್ಯತೆಗಳಿವೆ.