ಕಲಬುರಗಿ: ನಗರದ ಜಿಲ್ಲಾಸ್ಪತ್ರೆಯ ವೈದ್ಯರ ಅಮಾನವೀಯ ನಡೆಯಿಂದಾಗಿ ಚಿಕಿತ್ಸೆ ಸಿಗದೆ ಗರ್ಭಿಣಿಯೊಬ್ಬಳು ಶುಕ್ರವಾರ ರಾತ್ರಿ ಪರದಾಡಿದ್ದು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಆಳಂದ ತಾಲೂಕಿನ ನಿಂಬರ್ಗಾದ ಗರ್ಭಿಣಿ ಮೇಘಾ ಅವರಿಗೆ ನಿನ್ನೆ ತಡರಾತ್ರಿ 1 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯೆ ಪ್ರಚೀತಾ ಮಾತ್ರ ಗರ್ಭಿಣಿಗೆ ಚಿಕಿತ್ಸೆ ನೀಡಲು ಆಗುವುದಿಲ್ಲ, ನೀವು ಸಮೀಪದ ಬಸವೇಶ್ವರ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ.
Advertisement
ಬೆಳಗ್ಗೆಯಿಂದ 18 ಹೆರಿಗೆ ಮಾಡಿಸಲಾಗಿದ್ದು, ಇನ್ನು ಮೂರು ಹೆರಿಗೆ ಮಾಡಿಸುವುದು ಬಾಕಿಯಿದೆ. ಅಷ್ಟೇ ಅಲ್ಲದೇ ಇನ್ನೊಬ್ಬರು ದಾಖಲಾಗಿದ್ದಾರೆ. ಈಗಾಗಲೇ ಮೇಲಿನ ಮಹಡಿಯಲ್ಲಿ ಸಿಬ್ಬಂದಿ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಗರ್ಭಿಣಿಯನ್ನು ದಾಖಲು ಮಾಡಿಕೊಳ್ಳುತ್ತೇವೆ, ಆದರೆ ತಾಯಿ ಹಾಗೂ ಮಗುವಿನ ಪ್ರಾಣಕ್ಕೆ ತೊಂದರೆಯಾದರೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.
Advertisement
ಎಷ್ಟು ಅಂತಾ ಕೆಲಸ ಮಾಡುವುದು. ಸಮೀಪದ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅವರಿಗೆ ನಾನು ಹೇಳುತ್ತೇನೆ. ನೀವು ಇಲ್ಲಿಯೇ ಕುಳಿತು ಮಗು ಹಾಗೂ ತಾಯಿಗೆ ಏನಾದರು ಸಮಸ್ಯೆಯಾದರೆ ಅದಕ್ಕೆ ನಾನು ಹೊಣೆಯಲ್ಲ ಎಂದು ವೈದ್ಯೆ ಪ್ರಚೀತಾ ಹೇಳಿದ್ದಾರೆ. ಇದನ್ನು ಗರ್ಭಿಣಿ ಸಂಬಂಧಿಕರು ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
Advertisement
ಕೊನೆಗೆ ಅನಿವಾರ್ಯವಾಗಿ ಗರ್ಭಿಣಿ ಮೇಘಾಳನ್ನು ಸಂಬಂಧಿಕರು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಮೇಘಾ ಒಂದು ಗಂಡು ಹಾಗೂ ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.