ಕಲಬುರಗಿ ಮೇಯರ್ ಚುನಾವಣೆ- ಮುಂದಿನ ವಾರ ಅಧಿಸೂಚನೆ

Public TV
1 Min Read
kalaburagi corporation mahanagara palike

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದ್ದು, ಮುಂದಿನ ವಾರ ಮೇಯರ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ.

ಒಟ್ಟು 55 ಸ್ಥಾನಗಳ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಿದ್ದು, ಮೇಯರ್ ಯಾರು ಎಂಬುದು ಕಗ್ಗಾಂಟಾಗಿದೆ. ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಮೇಯರ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿ, ಸಮಾನಂತರ ಹೋರಾಟ ನಡೆಸಿವೆ. ಈ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಮಹಾನಗರ ಪಾಲಿಕೆಯಲ್ಲಿ ಹೊರಹೊಮ್ಮಿದ ಕಾಂಗ್ರೆಸ್ ತನ್ನ ಪಕ್ಷದ ಅತಿರಥ ನಾಯಕರಿಂದ ಜೆಡಿಎಸ್ ಬೆಂಬಲಕ್ಕೆ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಸಿಎಂ, ಖರ್ಗೆ ಮೈತ್ರಿಗಾಗಿ ಕೇಳಿದ್ದಾರೆ, ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇವೆ: ಎಚ್‍ಡಿಡಿ

ಇತ್ತ ಯಾವುದೇ ಸ್ಥಳೀಯ ಚುನಾವಣೆಗಳಿರಲಿ ತಂತ್ರಗಾರಿಕೆಯಿಂದ ಅಧಿಕಾರ ಗಿಟ್ಟಿಸಿಕೊಳ್ಳುವ ಬಿಜೆಪಿ, ಕಲಬುರಗಿ ಮೇಯರ್ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ. ಶತಾಯಗತಾಯ ಈ ಸ್ಥಾನ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದೆ.

ಈಗಾಗಲೇ ತಮ್ಮ ಪಕ್ಷದಿಂದ ಆಯ್ಕೆಯಾದ ಸದಸ್ಯರು ಯಾರಿಗೆ ಬೆಂಬಲ ಕೊಡಬೇಕೆಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೇಂಬುದನ್ನು ನಿರ್ಧರಿಸಲು ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಅಧಿಕಾರ ನೀಡಲಾಗಿದೆ.

ಜೆಡಿಎಸ್ ನ ನಾಲ್ವರು ಸದಸ್ಯರು, ಸ್ಥಳೀಯ ಜೆಡಿಎಸ್ ಮುಖಂಡರು ರೆಸಾರ್ಟ್ ನಲ್ಲಿ ಉಳಿದಿದ್ದು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೆ ನಾಲ್ವರು ಸದಸ್ಯರು ಇಂದು ಬಿಡದಿ ಬಳಿಯ ಕುಮಾರಸ್ವಾಮಿಯವರ ನಿವಾಸದಲ್ಲಿ ಗಣೇಶ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಉಸ್ತಾದ ನಾಸೀರ ಹುಸೇನ್, ಈಗಾಗಲೇ ನಮ್ಮ ನಿರ್ಧಾರ ಪ್ರಕಟಿಸಿ ಆಗಿದೆ. ಯಾರು ನಮ್ಮ ಬೇಡಿಕೆಗೆ ಒಪ್ಪುತ್ತಾರೋ ಅವರನ್ನೊಳಗೊಂಡ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ. ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರು ಈ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ನಿರ್ಧಾರದ ನಂತರವೇ ಸದಸ್ಯರೊಂದಿಗೆ ಕಲಬುರಗಿಗೆ ಪ್ರಯಾಣ ಬೆಳೆಸುವುದಾಗಿ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *