– ನಮ್ಮೆಲ್ಲರ ಜೀವ ಇವಿಎಂ ಮಷಿನ್‍ನಲ್ಲಿ ಭದ್ರವಾಗಿದೆ
– ಮೋದಿ, ಚುನಾವಣಾ ಆಯೋಗದ ವಿರುದ್ಧ ಕಿಡಿ
ಕಲಬುರಗಿ: ನಮ್ಮೆಲ್ಲರ ಜೀವ ಇವಿಎಂ ಮಷಿನ್‍ನಲ್ಲಿ ಭದ್ರವಾಗಿದೆ. ಅದರಲ್ಲಿ ಏನ್ ಮಾಡಿದ್ದಾರೋ ಏನೋ ಗೊತ್ತಿಲ್ಲ. ಆದರೆ ನಮ್ಮ ಜನರ ಅಭಿಪ್ರಾಯ ಮತ್ತು ಕೆಲಸ ಮಾಡಿರೋದನ್ನ ಕೇಳಿದರೆ ಯಾವ ಸಮೀಕ್ಷೆ ಹೇಗೆ ಮಾಡಿದೆ ಎಂದು ಗೊತ್ತಿಲ್ಲ. ಒಬ್ಬ ವ್ಯಕ್ತಿ ಕೆಲಸ ಮಾಡಿದ ಮೇಲೂ ಈ ಸಮೀಕ್ಷೆ ಯಾವ ಆಧಾರದ ಮೇಲೆ ನೀಡಿದೆ ಅನ್ನೋದನ್ನ ಮೇ 23ಕ್ಕೆ ನೋಡೋಣ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರವರ ಮಾಹಿತಿ ಪ್ರಕಾರ ಅವರು ಎಕ್ಸಿಟ್ ಪೋಲ್ ಕೊಟ್ಟಿದ್ದಾರೆ. ನಮಗೆ ಇರುವ ಮಾಹಿತಿ ಮತ್ತು ನಮ್ಮ ಎಕ್ಸಿಟ್ ಪೋಲ್ ಗೂ ಇದಕ್ಕೂ ಬೇರೆ ಬೇರೆ ವ್ಯತ್ಯಾಸ ಇದೆ. ಗ್ರೌಂಡ್ ರಿಪೋರ್ಟ್ ನಲ್ಲಿ ಕೆಲಸ ಮಾಡಿರುವ ನಮ್ಮ ಕಾರ್ಯಕರ್ತರು ಬೇರೆಯದನ್ನೇ ರಿಪೋರ್ಟ್ ಕೊಟ್ಟಿದ್ದಾರೆ. ಎಕ್ಸಿಟ್ ಪೋಲ್ ನಲ್ಲಿ ಏಳು ಮತ್ತು ಎರಡು, ಮೂರು ಸೀಟು ಎಂದು ತೋರಿಸಿದ್ದಾರೆ. ಈ ಹಿಂದೆ ಕರ್ನಾಟಕದದಲ್ಲಿ ಕನಿಷ್ಟ ಅಂದರೂ ಏಳೆಂಟು ಸೀಟು ಬಂದಿವೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಒಂದು ವೇಳೆ ಹಾಗೇನಾದರೂ ಎರಡು ಮೂರು ಸೀಟು ಬಂದರೆ ಇವಿಎಂ ಗಡಿಬಿಡಿಯಾಗಿದೆ ಎಂದೇ ಅರ್ಥ ಎಂದು ಹೇಳುವ ಮೂಲಕ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದರು. ಮೋದಿ ಮೊದಲಿನಿಂದಲೂ ಕಾಂಗ್ರೆಸ್ 40 ಸೀಟು ದಾಟಲ್ಲ ಎಂದು ಹೇಳುತ್ತಿದ್ದಾರೆ. ಹೇಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಮೋದಿ ಯಾವುದನ್ನ ದುರುಪಯೋಗ ಮಾಡಿಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಇದರಲ್ಲಿ ಏನಾದರೂ ಗೋಲ್ ಮಾಲ್ ಇದೆ ಎಂದು ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
Advertisement
ಫಲಿತಾಂಶಕ್ಕೆ ನಾಳೆ ಒಂದೇ ದಿನ ಬಾಕಿ ಇರೋದು. ಫಲಿತಾಂಶದ ಸಂಖ್ಯಾ ಬಲದ ಆಧಾರ ಮೇಲೆ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು. ಸೋನಿಯಾ ಗಾಂಧಿ ಎಕ್ಸಿಟ್ ಪೋಲ್ ಆದ ಮೇಲೆ ಸರ್ವ ಪಕ್ಷ ಸಭೆ ಕರೆಯುವ ನಿರ್ಣಯ ಮಾಡಿದ್ದಾರೆ. ಹೀಗಾಗಿ ನಾಳೆ (ಬುಧವಾರ) ಸೋನಿಯಾ ಗಾಂಧಿ ನೇತೃತ್ವದದಲ್ಲಿ ಸರ್ವಪಕ್ಷ ವಿಪಕ್ಷಗಳ ಸಭೆ ಕರೆದಿದ್ದಾರೆ ಎಂದರು.
Advertisement
ಚುನಾವಣೆಯನ್ನು ಇಷ್ಟೊಂದು ಉದ್ದ ರೀತಿಯಲ್ಲಿ ಎಳೆಯಬಾರದು ಎಂದು ಬಿಹಾರ ಮುಖ್ಯಮಂತ್ರಿ ನೀತಿಶ್ ಕುಮಾರ್ ಹೇಳಿದ್ದಾರೆ. ಮೋದಿ ಎಲ್ಲಾ ಕಡೆ ಹೋಗಿ ಜಾಥಾ ಮಾಡುವುದಕ್ಕೆ ಟೈಮ್ ಅಡ್ಜೆಸ್ಟ್ ಮಾಡಿದ್ದಾರೆ. ನಾವು ಹಿಂದೆ ಒಂದೆರೆಡು ದಿನದಲ್ಲಿ ಚುನಾವಣೆ ಮಾಡಿ ಮುಗಿಸಿದ್ದೇವೆ. ಇಲ್ಲಿ ವೋಟಿಂಗ್ ನಡೆದಿದೆ. ಮೋದಿ ಕೇದಾರನಾಥ್ ನಲ್ಲಿ ಶಾಲು ಹಾಕಿಕೊಂಡು ಧ್ಯಾನ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇವುಗಳನ್ನೆಲ್ಲಾ ಗಮನಿಸುತ್ತಿದ್ದರೆ ಮೋದಿ ಎಷ್ಟು ನಾಟಕ ಮಾಡುತ್ತಿದ್ದಾನೆ ಎಂಬುದು ಗೊತ್ತಾಗುತ್ತದೆ. ಶಾಲು ಹಾಕಿಕೊಂಡು ಕೈ ಯಲ್ಲಿ ಕೋಲು ಹಿಡಿದುಕೊಂಡು ಫೋಟೋಗ್ರಾಫರ್ ಹೀಗೆ ತೆಗೆಯರಿ ಹಾಗೆ ತೆಗೆಯರಿ ಎಂದು ಹೇಳಿದ್ದಾರೆ. ಮೋದಿ, ಅಮಿತ್ ಷಾ, ನೀತಿ ಸಂಹಿತೆ ಉಲ್ಲಂಘನೆ ಮಾಡಿದರೂ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ. ಇದೆಲ್ಲ ನೋಡಿದರೆ ಚುನಾವಣಾ ಆಯೋಗ ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಮತ್ತೊಂದು ಕಾನೂನು ರೀತಿಯಲ್ಲಿ ಮಾಡುತ್ತಿದೆ. ಪ್ರಧಾನಿ ಮೋದಿಯೇ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಕಿಡಿಕಾರಿದರು.