ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಹೆಬ್ಬಾಗಿಲು ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಇದೀಗ ಸೂತಕದ ಛಾಯೆ ಆವರಿಸಿದ್ದು, ಆರಂಭವಾಗಿ ಆರೇ ವರ್ಷಕ್ಕೆ ವಿಮಾನ ಹಾರಾಟವಿಲ್ಲದೆ ಇದೀಗ ಬಂದ್ ಆಗಿದೆ.
ಅಕ್ಟೋಬರ್ 15 ರಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ಸ್ಟಾರ್ ಏರ್ (Star Air) ವಿಮಾನ ಸಹ ಸ್ಥಗಿತಗೊಂಡಿದೆ. ಈ ಮೂಲಕ ಸದ್ಯ ಕಲಬುರಗಿ ವಿಮಾನ ನಿಲ್ದಾಣದಿಂದ ಇದೀಗ ಒಂದೇ ಒಂದು ವಿಮಾನ ಸಹ ಹಾರಾಟ ನಡೆಸದೇ ಬಂದ್ ಆಗಿದೆ.
ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಲೋಹದ ಹಕ್ಕಿ ಹಾರಾಟಕ್ಕಾಗಿ 2008 ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ (Yediyurppa) ಅಡಿಗಲ್ಲು ಹಾಕಿದ್ದರು. ಅದಾದ ಬಳಿಕ ಕುಂಟುತ್ತಾ ಕಾಮಗಾರಿ ಆರಂಭವಾಗಿ ಕೊನೆಗೆ 2019 ರಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ಮೊದಲ ವಿಮಾನಯಾನ ಸೇವೆ ಆರಂಭವಾಗಿತ್ತು.
ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನಲೆ ನಿತ್ಯ ಎರಡು ವಿಮಾನ ಸೇರಿದಂತೆ ತಿರುಪತಿಗೂ ಸಹ ಕಲಬುರಗಿಯಿಂದ ಸ್ಟಾರ್ ಏರ್ ಸಂಸ್ಥೆ ವಿಮಾನ ಸೇವೆ ಆರಂಭಿಸಿದ್ದಾಗ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಹೀಗಾಗಿ ಕಲಬುರಗಿಯಿಂದ ಬೆಂಗಳೂರಿಗೆ 50 ಸೀಟ್ ಬದಲು 80 ಸೀಟ್ ಸಾಮರ್ಥ್ಯದ ವಿಮಾನ ಸೇವೆ ಆರಂಭಿಸಲಾಯಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬ ನೆಪ ಹೇಳಿ ಕೆಲ ತಿಂಗಳ ಹಿಂದೆ ತಿರುಪತಿ ಫ್ಲೈಟ್ ರದ್ದು ಪಡಿಸಲಾಯಿತ್ತು. ಇದೀಗ ಬೆಂಗಳೂರಿಗೆ ಸಂಚರಿಸುವ ಸ್ಟಾರ್ ಏರ್ ಫ್ಲೈಟ್ ಸಹ ಏಕಾಏಕಿ ಬಂದ್ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಕೇಳಿದರೆ ಸ್ಟಾರ್ ಏರ್ ಸಂಸ್ಥೆ ಬಂದ್ ಮಾಡಿದೆ. ಹೀಗಾಗಿ ಇಂಡಿಗೋ ಕಂಪನಿಯವರು ವಿಮಾನ ಸೇವೆ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಮಾನ ಸಂಚಾರ ಸ್ಥಗಿತದ ಹಿಂದೆ ರಾಜಕೀಯ ಕೈವಾಡ ಸಹ ಕೇಳಿ ಬರುತ್ತಿದ್ದು, ಈ ಮೂಲಕ ರಾಜಕೀಯ ಜಗಳದಲ್ಲಿ ಜಿಲ್ಲೆಯ ಜನರ ಪ್ರಯಾಣ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ.

