– ಇಬ್ಬರೂ ಬೆಂಗಳೂರಿನಲ್ಲಿ ಪತ್ತೆ
ಕಲಬುರಗಿ: 10ನೇ ತರಗತಿ ಓದುತ್ತಿದ್ದ ಹುಡುಗ ತನ್ನ ಜೊತೆಗೆ ಓದುತ್ತಿದ್ದ ವಿದ್ಯಾರ್ಥಿನಿಯನ್ನ ಅಪಹರಿಸಿರುವ ಘಟನೆ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕುಟುಂಬಸ್ಥರ ವಶಕ್ಕೆ ನೀಡಿದ್ದಾರೆ. ಇತ್ತ ಬಾಲಕನನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.
ಏನಿದು ಪ್ರಕರಣ:
ದಿನಾಂಕ 7-3-2020ರಂದು ವಿದ್ಯಾರ್ಥಿನಿ ಪರೀಕ್ಷೆ ಕುರಿತಾಗಿ ಶಿಕ್ಷಕರ ಬಳಿ ನೋಟ್ಸ್ ಪಡೆದುಕೊಂಡು ಹೋಗುತ್ತೇನೆಂದು ಮನೆಯಿಂದ ಹೊರಟಿದ್ದಾಳೆ. ಮಧ್ಯಾಹ್ನ ಬಾಲಕಿಯ ಕುಟುಂಬಸ್ಥರಿಗೆ ಫೋನ್ ಮಾಡಿದ ಶಾಲೆಯ ಸಿಬ್ಬಂದಿ, ನಿಮ್ಮ ಮಗಳನ್ನು ನಮ್ಮದೇ ಶಾಲೆಯ ವಿದ್ಯಾರ್ಥಿ ಬಲವಂತವಾಗಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಾವು ತಡೆಯುವಷ್ಟರಲ್ಲಿ ಆತ ಹೋದ ಎಂಬ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಬಂದ ವಿದ್ಯಾರ್ಥಿನಿ ಕುಟುಂಬಸ್ಥರು ಎಲ್ಲ ಮಾಹಿತಿ ಪಡೆದು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಮೊದಲು ಬಾಲಕನ ಬಳಿಯಿದ್ದ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ತದನಂತರ ಇಬ್ಬರು ಬೆಂಗಳೂರಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೂಡಲೇ ಬೆಂಗಳೂರಿಗೆ ತೆರಳಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.