ಕಲಬುರಗಿ: ಭೀಮಾತೀರದಲ್ಲಿ ಮತ್ತೆ ಗುಂಡು ಸದ್ದು ಮಾಡಿದೆ. ಸಿನೀಮಿಯ ರೀತಿಯಲ್ಲಿ ಪಿಸ್ತೂಲ್ ಬಾಯಿಗಿಟ್ಟು ಫೈರಿಂಗ್ ಮಾಡಿರುವ ಭಯಾನಕ ಘಟನೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಅಫಜಲಪುರದ ಕರಜಗಿ ಗ್ರಾಮದ ನಿವಾಸಿ ಸೈಬಣ್ಣ ನೀಲಕಂಠ ತಳವಾರ (28) ಗುಂಡಿನ ದಾಳಿಗೆ ಬಲಿಯಾದ ಯುವಕ. ಅದೇ ಗ್ರಾಮದ ರವಿ ತಳವಾರ ಅಲಿಯಾಸ್ ಅಭಯ್ ಕೊಲೆ ಮಾಡಿದ ಆರೋಪಿ.
ಆರೋಪಿ ರವಿ ಸೋಮವಾರ ಸಂಜೆ ಸೈಬಣ್ಣನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾನೆ. ಪರಿಣಾಮ ಸೈಬಣ್ಣ ಗಂಭೀರವಾಗಿ ಗಾಯಗೊಂಡಿದ್ದ. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಆತನನ್ನು ಬೈಕ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ಜಿಲ್ಲಾಸ್ಪತ್ರಗೆ ರವಾನೆ ಮಾಡಲು ಮುಂದಾಗುತ್ತಿದ್ದಾಗ ಸೈಬಣ್ಣ ಸಾವನ್ನಪ್ಪಿದ್ದಾನೆ.
ಹಳೆಯ ವೈಷಮ್ಯದಿಂದ ರವಿ ಸೈಬಣ್ಣನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಯು ಈ ಹಿಂದೆ ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಕ್ಕೆ ಸಿಪಿಐ ಮಹಾಂತೇಶ್ ಪಾಟೀಲ, ಪಿಎಸ್‍ಐ ಮಂಜುನಾಥ ಹೂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರವಿ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.