ಕಲಬುರಗಿ: ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನ ಹಾಗೂ ಮೊಬೈಲ್‍ಗಾಗಿ ಪ್ರಿಯಕರಿಗೆ ಚಾಕು ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ನರೋಣ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮನೋಜ್ ಅಲಿಯಾಸ್ ಪ್ರಸಾದ್ ಮಠಪತ್ತಿ ಕೊಲೆಯಾಗಿದ ದುರ್ದೈವಿ. ಕಲಬುರಗಿ ಹೊರವಲಯದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು 23ರಂದು ಘಟನೆ ನಡೆದಿದ್ದು, ಕೃತ್ಯ ಎಸಗಿದ್ದ ಕಡಗಂಚಿ ಗ್ರಾಮದ ಶಾಂತಪ್ಪ ದಂಡಘುಟಿ ಹಾಗೂ ಇನ್ನೋರ್ವ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಆಗಿದ್ದೇನು?: ಮನೋಜ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ತನ್ನ ಜನ್ಮದಿನ ಇಲ್ಲದಿದ್ದರೂ, ಕೇಂದ್ರಿಯ ವಿಶ್ವವಿದ್ಯಾಲಯದ ಕಟ್ಟಡ ಒಂದರ ಮೇಲೆ ಕೇಕ್ ಕತ್ತರಿಸಿ ಮನೋಜ್ ಸಂಭ್ರಮಿಸಿದ್ದ. ಬಳಿಕ ಕ್ಯಾಂಪಸ್‍ನಲ್ಲಿ ಏಕಾಂತವಾಗಿ ಮನೋಜ್ ತನ್ನ ಪ್ರೇಯಸಿಯ ಜೊತೆಗೆ ಕುಳಿತಿದ್ದ.
Advertisement
Advertisement
ಕಳ್ಳತನ ಮಾಡಲು ಬಂದಿದ್ದ ಶಾಂತಪ್ಪ ದಂಡಘುಟಿ ಹಾಗೂ ಮತ್ತೋರ್ವ ಯುವಕ ಪ್ರೇಮಿಗಳಿಗೆ ಚಾಕು ತೋರಿಸಿ ಮೊಬೈಲ್ ಹಾಗೂ ಚಿನ್ನದ ಸರ ನೀಡುವಂತೆ ತಿಳಿಸಿದ್ದಾರೆ. ಆದರೆ ಇದಕ್ಕೆ ಹೆದರದ ಮನೋಜ್, ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಶಾಂತಪ್ಪ ಚಾಕು ಬೀಸಿದ ಪರಿಣಾಮ ಮನೋಜ್ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿದೆ. ಮನೋಜ್ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾನೆ ಎಂದು ಮತ್ತೆ ಹೊಟ್ಟೆಗೆ ಚಾಕುನಿಂದ ಇರಿದು ಕೊಲೆ ಮಾಡಿ, ಯುವತಿಯ ಬಳಿ ಇದ್ದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
ಆರೋಪಿಗಳು ಸಿಕ್ಕಿದ್ದು ಹೇಗೆ?:
ಯುವತಿಯಿಂದ ಕಿತ್ತುಕೊಂಡು ಬಂದಿದ್ದ ಮೊಬೈಲ್ ಅನ್ನು ತಮ್ಮ ಗ್ರಾಮದ ಕಡಗಂಚಿಯ ನಿವಾಸಿ ಲಕ್ಷ್ಮಣ ಎಂಬವರಿಗೆ ಮಾರಾಟ ಮಾಡಿದ್ದಾರೆ. ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಗ್ರಾಮಕ್ಕೆ ಬಂದಿದ್ದ. ಆರೋಪಿಗಳಿಂದ ಕಡಿಮೆ ಬೆಲೆ ಮೊಬೈಲ್ ಪಡೆದಿದ್ದ ಲಕ್ಷ್ಮಣ ಮತ್ತೆ ಪುಣೆಗೆ ಕೆಲಸಕ್ಕೆ ಮರಳಿದ್ದ. ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು, ಮೊಬೈಲ್ ಪುಣೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಲಕ್ಷ್ಮಣನನ್ನು ವಶಕ್ಕೆ ಪಡೆದು, ಕರೆ ತಂದಿದ್ದರು.
ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನಾವು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ಚಾಕು ತಗುಲಿಸಿದ್ದರಿಂದ ಎಲ್ಲಿ ನಮ್ಮ ಹೆಸರು ಹೇಳುತ್ತಾನೆ ಅಂತಾ ಕೊಲೆ ಮಾಡಿದ್ದೇವೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಈ ಹಿಂದೆ ಕ್ಯಾಂಪಸ್ ನಿರ್ಜನ ಪ್ರದೇಶದಲ್ಲಿ ಸಿಗುತ್ತಿದ್ದ ಪ್ರೇಮಿಗಳನ್ನು ಬೆದರಿಸಿ, ಅವರಿಂದ ಹಣ ದೋಚುತ್ತಿದ್ದೇವು ಅಂತಾ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದಿರುದನ್ನು ಕೆಲ ದುಷ್ಕರ್ಮಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಈ ಹಿಂದೆ ಕ್ಯಾಂಪಸ್‍ನಲ್ಲಿ ಕುರಿ ಮೇಯಿಸುವ ನೇಪದಲ್ಲಿ ಬಂದು, ಕಳ್ಳತನ ಮಾಡುತ್ತಿದ್ದರು. ತರಗತಿಗಳು ಮುಗಿದ ಮೇಲೆ ಕ್ಯಾಂಪಸ್‍ನಲ್ಲಿ ಏಕಾಂಗಿಯಾಗಿ ಸಿಗುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ, ಹಣ ದೋಚುತ್ತಿದ್ದರು ಎನ್ನವ ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv