ರಗಡ್ ಲುಕ್‌ನಲ್ಲಿ ಮಿಂಚಿದ್ದ ‘ತಾರಕಾಸುರ’ ರವಿಯೀಗ ಕೈಲಾಸದ ಲವರ್ ಬಾಯ್!

Public TV
2 Min Read
Kailasa Kasidre

ರ್ಷಾಂತರಗಳ ಹಿಂದೆ ‘ತಾರಕಾಸುರ’ ಎಂಬ ಚಿತ್ರದ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ರವಿ. ಮೊದಲ ಚಿತ್ರದಲ್ಲಿಯೇ ರವಿ (Ravi)  ಪಾತ್ರವನ್ನು ನಿಭಾಯಿಸಿದ್ದ ರೀತಿಗೆ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಈ ಸಂಬಂಧವಾಗಿ ರವಿ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದರು. ಅಂಥಾದ್ದೊಂದು ಸವಾಲಿನ ಪಾತ್ರ ಮಾಡಿ ಸೈ ಅನ್ನಿಸಿಕೊಂಡ ನಂತರ ಅದೇಕೋ ಸುದೀರ್ಘ ಕಾಲಾವಧಿಯವರೆಗೆ ರವಿ ಮರೆಯಾದಂತಿದ್ದರು. ಇದೀಗ ಅವರು ನಾಗ್ ವೆಂಕಟ್ ನಿರ್ದೇಶನದ ‘ಕೈಲಾಸ ಕಾಸಿದ್ರೆ’ (Kailasa Kasidre) ಚಿತ್ರದ ಮೂಲಕ ಹೊಸ ಗೆಟಪ್‌ನಲ್ಲಿ ಮತ್ತೆ ಮರಳಿದ್ದಾರೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ವಿವರಗಳನ್ನು ಹರವುತ್ತಲೇ, ತಾವು ಬ್ರೇಕ್ ತೆಗೆದುಕೊಂಡಿದ್ದರ ಹಿಂದಿನ ಕೆಲ ರಹಸ್ಯ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ.

Kailasa Kasidre 1

ಸಾಮಾನ್ಯವಾಗಿ, ಒಂದು ಬಗೆಯ ಸಿನಿಮಾ ಗೆದ್ದರೆ ಆ ನಂತರ ಅಂಥಾದ್ದೇ ಧಾಟಿಯ ಮತ್ತೊಂದಷ್ಟು ಸಿನಿಮಾಗಳು ರೂಪುಗೊಳ್ಳುತ್ತವೆ. ಓರ್ವ ನಾಯಕ ನಟ ಒಂದು ಬಗೆಯ ಪಾತ್ರದ ಮೂಲಕ ಜನರನ್ನು ಸೆಳೆದುಕೊಂಡರೆ, ಆತನಿಗಾಗಿ ಅಂಥಾದ್ದೇ ಶೇಡ್ ಹೊಂದಿರುವ ಪಾತ್ರಗಳು ಅರಸಿ ಬರುತ್ತವೆ. ‘ತಾರಕಾಸುರ’ ಚಿತ್ರದಲ್ಲಿನ ರಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರವಿಯ ಮುಂದೆ ಅಂಥಾದ್ದೇ ಶೇಡಿನ ಅದೆಷ್ಟೋ ಕಥೆಗಳು ಕುಣಿದಾಡಿದ್ದವಂತೆ.

Kailasa Kasidre 4

ಆದರೆ ಸಿನಿಮಾದಿಂದ ಸಿನಿಮಾಕ್ಕೆ ಬೇರೆ ಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ರವಿ ಅವರ ಇಂಗಿತವಾಗಿತ್ತು. ಬಂದ ಅವಕಾಶಗಳನ್ನೆಲ್ಲ ನಿರಾಕರಿಸಿ, ಹೊಸಾ ಬಗೆಯ ಪಾತ್ರಕ್ಕಾಗಿ ಅರಸುತ್ತಿದ್ದಾಗ ಎದುರುಗೊಂಡಿದ್ದ ಸಿನಿಮಾ ಕೈಲಾಸ ಕಾಸಿದ್ರೆ.

Kailasa Kasidre 2

‘ತಾರಕಾಸುರ’ ಚಿತ್ರದ ನಂತರದಲ್ಲಿ ಒಂದೇ ಒಂದು ಲವ್ ಸ್ಟೋರಿಯನ್ನೂ ರವಿ ಕೇಳಿಸಿಕೊಂಡಿರಲಿಲ್ಲವಂತೆ. ನಿರ್ದೇಶಕ ನಾಗ್ ವೆಂಕಟ್ ಈ ಕಥೆ ಹೇಳಿದಾಗ, ನಾಯಕನ ಪಾತ್ರದ ಬಗ್ಗೆ ವಿವರಿಸಿದಾಗ ಒಂದೇ ಸಲಕ್ಕೆ ರವಿ ಒಪ್ಪಿಗೆ ಸೂಚಿಸಿದ್ದರಂತೆ. ಇಲ್ಲಿ ಯುವ ಆವೇಗದ ಕಥೆ ಇದೆ. ಇಂಜಿನಿಯರಿಂಗ್ ಮುಗಿಸಿಕೊಂಡು ಕೆಲಸಕ್ಕಾಗಿ ಅರಸುವ ಘಟ್ಟದ ಯುವಕನ ಪಾತ್ರವನ್ನಿಲ್ಲಿ ರವಿ ಆವಾಹಿಸಿಕೊಂಡಿದ್ದಾರೆ. ಈ ಹಂತದಲ್ಲಿ ಆ ಯುವಕ ಪ್ರೀತಿಗಾಗಿ ಏನೇನು ಮಾಡುತ್ತಾನೆ, ಈ ನಡುವೆ ಅಡ್ಡದಾರಿ ಹಿಡಿದಾಗ ಏನೇನಾಗುತ್ತೆ ಎಂಬುದರ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ.

Kailasa Kasidre 3

ಒಟ್ಟಾರೆಯಾಗಿ ಒಂದು ಬದಲಾವಣೆಗಾಗಿ ಹಂಬಲಿಸುತ್ತಿದ್ದ ರವಿ ಇಲ್ಲಿ ಲವರ್ ಬಾಯ್ ಆಗಿ, ನಾನಾ ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಹಾಡುಗಳು ಮತ್ತು ಟ್ರೈಲರ್ ಮೂಲಕ ರವಿ ನಿಭಾಯಿಸಿರುವ ಪಾತ್ರದ ಚಹರೆಗಳು ಜಾಹೀರಾಗಿವೆ. ಈ ಸಿನಿಮಾ ‘ತಾರಕಾಸುರ’ ನಂತರದಲ್ಲಿ ತನಗೆ ಮತ್ತೊಂದು ತೆರನಾದ ಇಮೇಜು ಕಟ್ಟಿಕೊಟ್ಟು, ಮತ್ತೊಂದು ಬ್ರೇಕ್ ನೀಡಲಿದೆ ಎಂಬ ಭರವಸೆಯೂ ರವಿ ಅವರಲ್ಲಿದೆ. ರಾ ಲುಕ್ಕು, ನಾನಾ ಅವತಾರದಿಂದ ಆಚೆ ಬರಬೇಕೆಂಬ ರವಿಯ ಹಂಬಲ ಕೈಲಾಸದ ಮೂಲಕ ಈಡೇರಿದೆ. ಟ್ರಾನ್ಸ್ ಸಾಂಗ್ ಮುಂತಾದ ಒಂದಷ್ಟು ಅಂಶಗಳು ಮತ್ತು ಅದಕ್ಕೆ ಸಿಕ್ಕಿರುವ ಪ್ರೇಕ್ಷಕರ ಬೆಂಬಲ ರವಿ ಪಾಲಿಗೆ ಭರವಸೆಯನ್ನು ಕಟ್ಟಿ ಕೊಟ್ಟಿದೆ.

ರವಿಗೆ (Ravi) ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‌ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಅಂದಹಾಗೆ, ಈ ಚಿತ್ರ ಇದೇ ತಿಂಗಳ 8ರಂದು ತೆರೆಗಾಣಲಿದೆ.

Share This Article