ಶಿವಮೊಗ್ಗ: ಇಂದಿನಿಂದ ಆರಂಭವಾದ ಸಾಗರ ಮಾರಿಕಾಂಬ ದೇವಿ ಜಾತ್ರೆಯ (Sagara Marikamba Jatre) ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ರಾಜ್ಯ ರಾಜಕಾರಣದ ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ (Kagodu Thimmappa) ಅವರು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಮಾರಿಕಾಂಬ ದೇವಿಯ ದರ್ಶನಕ್ಕೆ ತೆರಳಿದ್ದರು. ಈ ವೇಳೆ ತೀವ್ರ ಉಸಿರಾಟ ಹಾಗೂ ಮಧುಮೇಹ ಸಮಸ್ಯೆಯಿಂದಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಉಪ ವಿಭಾಗೀಯ ಆಸ್ಪತ್ರೆಯ ವೈದ್ಯ ವಿಕ್ರಂ ಚಿಕಿತ್ಸೆ ನೀಡುತ್ತಿದ್ದಾರೆ.
ದೇವಸ್ಥಾನದಲ್ಲಿ ತೀವ್ರ ಜನಸಂದಣಿ ಇದ್ದಿದ್ದರಿಂದ ಉಸಿರಾಟ ಸಮಸ್ಯೆಯಾಗಿದ್ದು, ಚಿಕಿತ್ಸೆಯಿಂದಾಗಿ ಆರೋಗ್ಯ ಸುಧಾರಣೆಯಾಗಿದೆ. ಅರೋಗ್ಯ ಚೇತರಿಕೆ ಕಂಡು ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

