ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಕಾಗಿನೆಲೆ ಶ್ರೀ

Public TV
1 Min Read
HDK KAGINELE SHRI

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪರ ಹಾಗೂ ವಿರೋಧ ಹೇಳಿಕೆ ನೀಡುವ ಮೂಲಕ ಸ್ವಾಮೀಜಿಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಾರೆ. ನಂಜಾವಧೂತ ಸ್ವಾಮೀಜಿ ಎಚ್‍ಡಿಕೆಯನ್ನು ಬೆಂಬಲಿಸಿದ ಬೆನ್ನಲ್ಲೇ ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ, ಸಮ್ಮಿಶ್ರ ಸರ್ಕಾರ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಸ್ಥಾನಮಾನ ನೀಡಿಲ್ಲ. ಅಷ್ಟೇ ಅಲ್ಲದೇ ಈಗ ಕುರುಬ ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರವು ಒಂದು ಜಾತಿ, ಸಮುದಾಯದ ಅಧಿಕಾರಿಗಳ ವಿರುದ್ಧ ದ್ವೇಷ ಸಾಧಿಸುತ್ತಿದೆ. ಇಂತಹ ಬೆಳವಣಿಗೆಯನ್ನು ಕೂಡಲೇ ಕುಮಾರಸ್ವಾಮಿಯವರು ನಿಲ್ಲಿಸಬೇಕು. ಇಲ್ಲವೇ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಸಮುದಾಯದ ದ್ವೇಷ ಸಾಧನೆ ಮಾಡುತ್ತಿದೆಯೇ ಹೊರತು, ರೈತರ ಆತ್ಮಹತ್ಯೆ ತಡೆಯುವ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಶ್ರೀಗಳು ಸಮ್ಮಿಶ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

KURUBHA SAMAJADA SANNAKKI

ಸರ್ಕಾರಕ್ಕೆ ಎಚ್ಚರಿಕೆ: ಆರಂಭದಲ್ಲಿ ಕುರುಬ ಸಮಾಜದ ಮುಖಂಡರಾದ ಸಿದ್ದರಾಮಯ್ಯರನ್ನು ಸರ್ಕಾರ ಕಡೆಗಣಿಸಿದ್ದ ಸರ್ಕಾರ ಈಗ ಕುರುಬ ಜನಾಂಗದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಕುರುಬ ಸಮಾಜ ಬಹಳ ಮಹತ್ವದ ಪಾತ್ರ ವಹಿಸಿದೆ. ನಮ್ಮ ಸಮಾಜ ಕಡೆಗಣಿಸಿದರೆ ಹೋರಾಟ ಮಾಡಬೇಕಾದೀತು ಎಂದು ಕುರುಬ ಸಮಾಜದ ಮುಖಂಡ ಸಣ್ಣಕ್ಕಿ ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ನಡೆದಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರು ಸಮ್ಮಿಶ್ರ ಸರ್ಕಾರದ ಪರವಾಗಿ ಮಾತನಾಡಿದ್ದರು. ಅಲ್ಲದೇ ಸರ್ಕಾರ ಉಳಿಸಿಕೊಂಡು ಹೋಗುವಂತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈಗ ಸಮ್ಮಿಶ್ರ ಸರ್ಕಾರ ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಯಿತೇ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *