– ಮುಂಬೈನಲ್ಲಿ ಸ್ವಂತ ಹಣದಲ್ಲಿ ಊಟ ಮಾಡಿದ್ದೇನೆ
ಬೆಳಗಾವಿ: ಯಾವುದೇ ಅಧಿಕಾರ ಹಾಗೂ ದುಡ್ಡಿಗಾಗಿ ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ ಎಂದು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಮಕ್ಕಳ ಮೇಲೆ ಪ್ರಮಾಣ ಮಾಡಿದ್ದಾರೆ.
ಕಾಗವಾಡ ಕ್ಷೇತ್ರದ ಉಗಾರ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಮಾಣ ಮಾಡುವ ಅವಶ್ಯಕೆತೆಯಿಲ್ಲ. ಆದರೆ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಈ ವ್ಯವಹಾರದಲ್ಲಿ ಒಂದು ರೂಪಾಯಿ ಪಡೆದಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷ ಸೇರಿದ್ದೇನೆ. ಮುಂಬೈನಲ್ಲಿ ಇದ್ದಾಗಲೂ ಸ್ವಂತ ಹಣದಲ್ಲಿಯೇ ಊಟ ಮಾಡಿದ್ದೇನೆ ಎಂದು ಹೇಳಿದರು.
Advertisement
Advertisement
ನಾನು 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಒಂದು ಕೆಲಸವೂ ಆಗಲಿಲ್ಲ. ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಬಿಟ್ಟು, ಅವರ ಬಳಿ ಏನನ್ನೂ ಕೇಳಲಿಲ್ಲ. ಸಿಎಂ ಯಡಿಯೂರಪ್ಪ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಪೂರ್ಣ ಭರವಸೆ ನೀಡಿದ ಮೇಲೆ ನಾನು ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ ಎಂದು ತಿಳಿಸಿದರು.
Advertisement
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಎನ್ನುತ್ತಾರೆ. ಆದರೆ ನಾನು ಸಿಎಂ ಯಡಿಯೂರಪ್ಪ ಅವರ ಬಳಿ ಮುಸ್ಲಿಂ ಸಮುದಾಯದ ಕೆಲಸ ತೆಗೆದುಕೊಂಡು ಹೋಗಿದ್ದೆ. ಅವರು ಯಾವುದೇ ಯೋಚನೆ ಮಾಡದೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಜೆಪಿ ಎಲ್ಲ ಸಮಾಜದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.