Connect with us

Bengaluru City

ಬಸವನಗುಡಿಯಲ್ಲಿ ಶುರುವಾಯ್ತು ಸಂಭ್ರಮದ ಕಡಲೆಕಾಯಿ ಪರಿಷೆ

Published

on

ಬೆಂಗಳೂರು: ಕಾರ್ತಿಕ ಮಾಸದ ಕಡೆಯ ಸೋಮವಾರವಾದ ಇಂದು ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ.

ಹೌದು, ರಾಜಧಾನಿಯ ಪ್ರಮುಖ ಹಬ್ಬಗಳಲ್ಲೊಂದಾದ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ದೊರೆತಿದೆ. ಬಿಬಿಎಂಪಿ ಮಹಾಪೌರರಾದ ಗಂಗಾಬಿಕೆಯವರು ಬೆಳಗ್ಗೆ 10 ಗಂಟೆಗೆ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ.

ಮುಂಜಾನೆಯಿಂದಲೇ ಭಕ್ತರು ಬಸವನಗುಡಿಯ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ಕಡಲೆಕಾಯಿಗಳನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಕೋರಿಕೆಯನ್ನು ಬೇಡಿಕೊಂಡಿದ್ದಾರೆ. ಅಲ್ಲದೇ ಗಣೇಶನಿಗೆ ಬೆಣ್ಣೆ ಅಲಂಕಾರದೊಂದಿಗೆ ಕಡಲೆಕಾಯಿ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗಿದೆ.

ಕಡಲೆಕಾಯಿ ಪರಿಷೆಗೆ ಸೇಲಂ, ಯಶವಂತಪುರ, ದೊಡ್ಡಬಳ್ಳಾಪುರ, ಮೈಸರೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕಡಲೆಕಾಯಿ ವ್ಯಾಪಾರಿಗಳು ಆಗಮಿಸಿದ್ದಾರೆ. ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಅತಿ ಹೆಚ್ಚು ಕಡಲೆಕಾಯಿ ಸ್ಟಾಲ್ ಗಳು ತಲೆ ಎತ್ತಿದೆ.

ಪರಿಷೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೇಯರ್ ಗಂಗಾಬಿಕೆ, ಪ್ರತಿ ವರ್ಷ ಕಡಲೆಕಾಯಿ ಪರಿಷೆ ನಡೆಯುವದರಿಂದ ಬಸವನಗುಡಿಗೆ ಗ್ರಾಮೀಣ ಸೊಗಡು ನೀಡುತ್ತದೆ. ಪರಿಷೆಗೆ ಬರುವ ಪ್ರತಿಯೊಬ್ಬರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಕವರ್‍ಗಳನ್ನು ಬಳಸಬಾರದು. ಸ್ವಚ್ಛ ಬೆಂಗಳೂರಿಗೆ ಕಡಲೆಕಾಯಿ ಪರಿಷೆ ಅಡಿಪಾಯವಾಗಬೇಕು. ಕಳೆದ ವರ್ಷದ ಪರಿಷೆಯಲ್ಲಿ ದಿವಂಗತ ಅನಂತ ಕುಮಾರ್ ಅವರು ಪಾಲ್ಗೊಂಡಿದ್ದರು. ಆದರೆ ಈ ಬಾರಿ ಅವರು ಇಲ್ಲ ಅನ್ನುವುದು ತುಂಬಾ ದುಃಖಕರ ವಿಚಾರ. ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಕನಸನ್ನು ನನಸಾಗಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಲಿದೆ ಎಂದು ಹೇಳಿದ್ರು.

ಕಡಲೆಕಾಯಿ ಪರಿಷೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕೆ, ಶಾಸಕ ಗರುಡಾಚಾರ್, ವಿಧಾನ ಪರಿಷತ್ ಸದಸ್ಯ ಸಿ.ಶರವಣ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *